ನ್ಯೂಜೆರ್ಸಿ: ಭಾರತದ ಸ್ವಾತಂತ್ರ್ಯ ದಿನದ ಪೆರೇಡ್ನಲ್ಲಿ ಬುಲ್ಡೋಜರ್ ಪ್ರದರ್ಶನ ಟೀಕಿಸಿದ ಮೇಯರ್

Photo: Twitter/Indian American Muslim Council
ನ್ಯೂಜೆರ್ಸಿ(New Jersey): ಇಲ್ಲಿನ ಎಡಿಸನ್ ಟೌನ್ಶಿಪ್ನಲ್ಲಿ ಭಾರತದ ಸ್ವಾತಂತ್ರ್ಯೋತ್ಸವ ದಿನದ ಪೆರೇಡ್ ಭಾಗವಾಗಿ ಹಿಂದುತ್ವ ಗುಂಪುಗಳು ಪ್ರಧಾನಿ ನರೇಂದ್ರ ಮೋದಿ(Narendra Modi) ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್(Adityanath) ಅವರ ಚಿತ್ರಗಳನ್ನು ಹೊಂದಿದ ಬುಲ್ಡೋಜರ್(bulldozer) ಅನ್ನೂ ಸೇರಿಸಿರುವುದನ್ನು ಅಲ್ಲಿನ ಮೇಯರ್ ಟೀಕಿಸಿದ್ದಾರೆ ಹಾಗೂ "ತಾರತಮ್ಯವನ್ನು ಪ್ರತಿನಿಧಿಸುವ ಯಾವುದೇ ಚಿಹ್ನೆ ಅಥವಾ ಕ್ರಮ ಸ್ವಾಗತಾರ್ಹವಲ್ಲ,'' ಎಂದು ಹೇಳಿದ್ದಾರೆ ಎಂದು scroll.in ವರದಿ ಮಾಡಿದೆ.
ಬುಲ್ಡೋಜರ್ ಅನ್ನು ಮೆರವಣಿಗೆ ಭಾಗವಾಗಿಸಿದ್ದು ವಿಭಜನೆಯ ಮತ್ತು ತಾರತಮ್ಯದ ಚಿಹ್ನೆಯಾಗಿದೆ ಎಂದು ಮೇಯರ್ ಸಮೀಪ್ ಜೋಷಿ ತಮ್ಮ ಹೇಳಿಕೆಯಲ್ಲಿ ತಿಳಿಸಿದರಲ್ಲದೆ ಈ ಸ್ವಾತಂತ್ರ್ಯ ದಿನದ ಪೆರೇಡ್ ಅನ್ನು ಟೌನ್ಶಿಪ್ ಪ್ರವರ್ತಿಸಿರಲಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಈ ಕಾರ್ಯಕ್ರಮವನ್ನು ಇಂಡಿಯನ್ ಬಿಸಿನೆಸ್ ಅಸೋಸಿಯೇಷನ್ ಆಯೋಜಿಸಿತ್ತು ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಇದನ್ನೂ ಓದಿ: ಯಾವುದೇ ದೇವರು ಬ್ರಾಹ್ಮಣರಲ್ಲ: ಜೆಎನ್ಯು ಉಪಕುಲಪತಿ
ಎಲ್ಲಾ ಸಮುದಾಯಗಳ ಹಾಗೂ ಸಂಸ್ಕೃತಿಗಳ ಜನರ ಭಾಗವಹಿಸುವಿಕೆಗಳೊಂದಿಗೆ ಸಂಭ್ರಮಾಚರಣೆ ಮಾಡುವ ನಿಟ್ಟಿನಲ್ಲಿ ನಮ್ಮ ಆಡಳಿತ ಬದ್ಧವಾಗಿದೆ ಎಂದೂ ಅವರು ಹೇಳಿದ್ದಾರೆ.
ಪೆರೇಡ್ನಲ್ಲಿ ಬುಲ್ಡೋಜರ್ ಬಳಕೆಯನ್ನು ವಿರೋಧಿಸಿ ಕೌನ್ಸಿಲ್ ಆನ್ ಅಮೆರಿಕನ್-ಇಸಲಾಮಿಕ್ ರಿಲೇಷನ್ ಇದರ ನ್ಯೂಜೆರ್ಸಿ ಘಟಕ ಹಾಗೂ ಇಂಡಿಯನ್ ಅಮೆರಿಕನ್ ಮುಸ್ಲಿಂ ಕೌನ್ಸಿಲ್ ಮತ್ತು ಹಿಂದೂಸ್ ಫಾರ್ ಹ್ಯೂಮನ್ ರೈಟ್ಸ್ ಹೇಳಿಕೆಗಳನ್ನು ನೀಡಿದ್ದವು.