ಸರಕಾರ ಸಕಾಲದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿಲ್ಲ, ಇದು ದೊಡ್ಡ ಸಮಸ್ಯೆಯಾಗಿದೆ: ನಿತಿನ್ ಗಡ್ಕರಿ

ಕೇಂದ್ರ ಸಚಿವ ನಿತಿನ್ ಗಡ್ಕರಿ (Photo:PTI)
ಹೊಸದಿಲ್ಲಿ: ಸರಕಾರವು ಸಕಾಲದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿಲ್ಲ. ಇದು ದೊಡ್ಡ ಸಮಸ್ಯೆಯಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ (Union Minister Nitin Gadkari)ರವಿವಾರದ ಕಾರ್ಯಕ್ರಮವೊಂದರಲ್ಲಿ ಹೇಳಿದರು.
"ನೀವು ಪವಾಡಗಳನ್ನು ಮಾಡಬಹುದು ... ಹಾಗೂ ಆ ಸಾಮರ್ಥ್ಯವಿದೆ ... ಭಾರತೀಯ ಮೂಲಸೌಕರ್ಯದ ಭವಿಷ್ಯವು ತುಂಬಾ ಉಜ್ವಲವಾಗಿದೆ. ನಾವು ಉತ್ತಮ ತಂತ್ರಜ್ಞಾನ, ಉತ್ತಮ ಆವಿಷ್ಕಾರಗಳು, ಉತ್ತಮ ಸಂಶೋಧನೆ, ವಿಶ್ವ ಮತ್ತು ದೇಶದಲ್ಲಿ ಯಶಸ್ವಿ ಪದ್ಧತಿಗಳನ್ನು ಸ್ವೀಕರಿಸಬೇಕೆನ್ನುವುದು ನನ್ನ ಸಲಹೆ. ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ವೆಚ್ಚವನ್ನು ಕಡಿಮೆ ಮಾಡುವ ಪರ್ಯಾಯ ಸಾಮಗ್ರಿಗಳನ್ನು ನಾವು ಹೊಂದಿರಬೇಕು ಹಾಗೂ ನಿರ್ಮಾಣದಲ್ಲಿ ಸಮಯವು ಅತ್ಯಂತ ಮುಖ್ಯವಾದ ವಿಷಯವಾಗಿದೆ. ಸಮಯವು ದೊಡ್ಡ ಬಂಡವಾಳವಾಗಿದೆ. ಸರಕಾರವು ಸರಿಯಾದ ಸಮಯಕ್ಕೆ ನಿರ್ಧಾರಗಳನ್ನು ತೆಗೆದುಕೊಳ್ಳದಿರುವುದು ದೊಡ್ಡ ಸಮಸ್ಯೆಯಾಗಿದೆ. ಸಮಯವು "ತಂತ್ರಜ್ಞಾನ ಅಥವಾ ಸಂಪನ್ಮೂಲಗಳಿಗಿಂತ ಹೆಚ್ಚು ಮುಖ್ಯವಾಗಿದೆ" "ಎಂದು ಮುಂಬೈನ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ಆಯೋಜಿಸಿದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಕೇಂದ್ರ ಸಚಿವರು ಹೇಳಿದರು.
ಕಳೆದ ವಾರ 2024 ರ ರಾಷ್ಟ್ರೀಯ ಚುನಾವಣೆ ಸೇರಿದಂತೆ ಮುಂಬರುವ ಚುನಾವಣೆಗಳ ಮೇಲೆ ಕೇಂದ್ರೀಕರಿಸಿ ರಚಿಸಲಾದ ಪ್ರಬಲ ಬಿಜೆಪಿ ಸಂಸದೀಯ ಮಂಡಳಿಯಿಂದ ಗಡ್ಕರಿ ಅವರನ್ನು ಕೈಬಿಡಲಾಗಿದೆ. ಗಡ್ಕರಿ ಬಿಜೆಪಿಯ ಮಾಜಿ ಅಧ್ಯಕ್ಷರು. ಆದ್ದರಿಂದ ಮಾಜಿ ಅಧ್ಯಕ್ಷರು ಯಾವಾಗಲೂ ಸಮಿತಿಯಲ್ಲಿರುವುದರಿಂದ ಅವರ ನಿರ್ಗಮನವು ಬಹಳಷ್ಟು ಅಚ್ಚರಿಗೆ ಕಾರಣವಾಗಿತ್ತು.





