ತಗ್ಗರ್ಸೆ: ಕಟ್ಟಡ ನಿರ್ಮಾಣ ಕಾರ್ಮಿಕರ ಸಮಾವೇಶ

ಬೈಂದೂರು, ಆ.23: ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ತಗ್ಗರ್ಸೆ ಗ್ರಾಮ ವ್ಯಾಪ್ತಿಯ ಚಂದನ, ಮೂಡನಗದ್ದೆ, ಹಾಲಂಬೇರು ಪ್ರದೇಶದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಮಾವೇಶವು ಸ್ಥಳಿಯ ಸೋಮ ಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಇಂದು ಜರಗಿತು.
ಸಿಐಟಿಯು ಮುಖಂಡ ಗಣೇಶ ತೊಂಡೆಮಕ್ಕಿ ಕಾರ್ಮಿಕರನ್ನುದ್ದೇಶಿಸಿ ಮಾತನಾಡಿ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ವಿವಿಧ 19 ರೀತಿಯ ಕಾನೂನು ಬದ್ಧ ಸೌಲಭ್ಯ ಪಡೆಯಲು ಕಾರ್ಮಿಕರು ಸಂಘಟಿತ ಹೋರಾಟಕ್ಕೆ ಮುಂದಾಗಬೇಕು ಎಂದು ಹೇಳಿದರು.
ಸಿಐಟಿಯು ತಾಲೂಕು ಸಂಚಾಲಕ ರೊನಾಲ್ಡ್ ರಾಜೇಶ್ ಕ್ವಾಡ್ರಸ್ ಕಟ್ಟಡ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ ದೊರಕುವ ವಿವಿಧ ಸಹಾಯ ಧನದ ಸೌಲಭ್ಯಗಳ ಮಾಹಿತಿ ನೀಡಿದರು. ಬೈಂದೂರು ತಾಲೂಕು ರೈತ, ಕಾರ್ಮಿಕ ಸಂಘದ ಮುಖಂಡರಾದ ವೀರಭದ್ರ ಗಾಣಿಗ ಮತ್ತು ವೆಂಕಟೇಶ್ ಕೋಣಿ ಶುಭ ಕೋರಿ ಮಾತನಾಡಿದರು.
ಚಂದನ, ಮೂಡಣಗದ್ದೆ, ಹಾಲಂಬೇರು ಪ್ರದೇಶ ವ್ಯಾಪ್ತಿಯೊಳಪಟ್ಟು ಚಂದನ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘದ ಘಟಕ ರಚನೆ ಮಾಡಲಾಯಿತು. ಅಧ್ಯಕ್ಷರಾಗಿ ಅಣ್ಣಯ್ಯ ಗಾಣಿಗ ಮೂಡಣಗದ್ದೆ, ಉಪಾಧ್ಯಕ್ಷ ಗಿರೀಶ್ ಗಾಣಿಗ, ಕಾರ್ಯದರ್ಶಿ ರಾಘವೇಂದ್ರ ಗಾಣಿಗ, ಕೋಶಾಧಿಕಾರಿ ಯಾಗಿ ಶ್ರೀಧರ ಗಾಣಿಗ ಎತ್ತಬೇರು ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.