ಹೈದರಾಬಾದ್-ಕರ್ನಾಟಕ ಭಾಗದ ಬುಡಕಟ್ಟು, ಅಲೆಮಾರಿ ಜನಾಂಗಕ್ಕೆ ಗ್ರಂಥಾಲಯ ಸ್ಥಾಪಿಸಿ: ಹೈಕೋರ್ಟ್ ನಿರ್ದೇಶನ

ಬೆಂಗಳೂರು, ಆ.23: ಕಲ್ಯಾಣ ಕರ್ನಾಟಕ(ಹೈದರಾಬಾದ್-ಕರ್ನಾಟಕ) ವ್ಯಾಪ್ತಿಗೆ ಒಳಪಡುವ ಜಿಲ್ಲೆಗಳಲ್ಲಿ ಬುಡಕಟ್ಟು, ಅಲೆಮಾರಿ ಜನಾಂಗಗಳಿಗೆ ಸಮುದಾಯಗಳಿಗೆ ಸಾರ್ವಜನಿಕ ಗ್ರಂಥಾಲಯಗಳನ್ನು (Public Library) ಸ್ಥಾಪಿಸುವ ಕುರಿತಂತೆ ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ.
ಈ ಕುರಿತಂತೆ ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಸಮುದಾಯಗಳ ಅಭಿವೃದ್ಧಿ ಸಂಘದ ಅಧ್ಯಕ್ಷ ರಾಮಸ್ವಾಮಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯ ಮೂರ್ತಿ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಅಲೆಮಾರಿ ಬುಡಕಟ್ಟು ಜನಾಂಗಗಳು ಶಿಕ್ಷಣ ಮತ್ತು ಜ್ಞಾನಾರ್ಜನೆಯಿಂದ ವಂಚಿತರಾಗಿದ್ದಾರೆ. ಹೀಗಾಗಿ, ಈ ಭಾಗದ ಜಿಲ್ಲೆಗಳಲ್ಲಿ ಬುಡಕಟ್ಟು, ಅಲೆಮಾರಿ ಜನಾಂಗಗಳಿಗೆ ಗ್ರಂಥಾಲಯಗಳನ್ನು ಸ್ಥಾಪಿಸುವಂತೆ ಅರ್ಜಿದಾರರು ನಾಲ್ಕು ವರ್ಷಗಳ ಹಿಂದೆ ಸರಕಾರಕ್ಕೆ ಅರ್ಜಿ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಹೈಕೋರ್ಟ್ ನ್ಯಾಯಪೀಠವು, ಗ್ರಂಥಾಲಯಗಳನ್ನು ಸ್ಥಾಪಿಸುವ ಬಗ್ಗೆ ತ್ವರಿತ ಕ್ರಮ ಕೈಗೊಳ್ಳಲು ಸರಕಾರಕ್ಕೆ 12 ವಾರಗಳ ಕಾಲಾವಕಾಶ ನೀಡಿ ವಿಚಾರಣೆ ಮುಂದೂಡಿತು.







