ಮಣಿಪಾಲ: ಮಾಹೆಯಿಂದ ಸಂಗೀತ ಅಕಾಡೆಮಿ ಪ್ರಾರಂಭ
ಮಣಿಪಾಲ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಕಲೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಂಗೀತ ಅಕಾಡೆಮಿ (ಮ್ಯೂಸಿಕ್ ಅಕಾಡೆಮಿ) ಒಂದನ್ನು ಪ್ರಾರಂಭಿಸಲು ಬೇಕಾದ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ಮಾಹೆಯ ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್ ತಿಳಿಸಿದ್ದಾರೆ.
ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸಾಯನ್ಸ್‌ನ ನೂತನ ಬ್ಯಾಚ್‌ಗಳ ವಿದ್ಯಾರ್ಥಿಗಳಿಗೆ ಇಂದು ನಡೆದ ಓರಿಯಂಟೇಷನ್ ದಿನ-2022 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.
‘ಮುಕ್ತ ಕಲೆ’ ಅಥವಾ ಮಾನವಿಕ ಶಾಸ್ತ್ರಗಳು ವಿಶ್ವವಿದ್ಯಾನಿಲಯವೊಂದರ ಹೃದಯ ಎನಿಸಿಕೊಂಡಿರುತ್ತದೆ. ಇವುಗಳಿಲ್ಲದೇ ಶೈಕ್ಷಣಿಕ ಬದುಕೆಂಬುದು ತೀರಾ ಯಾಂತ್ರಿಕವೆನಿಸಿಕೊಳ್ಳುತ್ತದೆ ಎಂದವರು ನುಡಿದರು.
ಮಣಿಪಾಲದ ವಿದ್ಯಾಸಂಸ್ಥೆಗಳಲ್ಲಿ ಪ್ರಾರಂಭದಲ್ಲಿ ಕೆಲವು ಅಂತರವಿಷಯ ಗಳಿದ್ದವು. ಆದರೆ ಈಗ ಮುಕ್ತ ಕಲೆಗಳ ಸೇರ್ಪಡೆಯಿಂದ ವಿಶ್ವವಿದ್ಯಾನಿಲಯ ಹೆಚ್ಚೆಚ್ಚು ಬಹುವಿಷಯ ಕೇಂದ್ರವಾಗುತ್ತಿದೆ. ಇದರೊಂದಿಗೆ ಬಹುವಿಷಯ ಸಂಶೋಧನೆಯೂ ಪ್ರಾರಂಭಗೊಳ್ಳಬೇಕಾದ ಅಗತ್ಯವಿದೆ ಎಂದು ಡಾ.ಸಭಾಹಿತ್ ನುಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಾ.ಶಶಿರಶ್ಮಿ ಆಚಾರ್ಯ ಮಾತನಾಡಿ, ಕಲೆ ಎಂಬುದು ಶಾಂತಿಗೆ ಮಾಧ್ಯಮವಾಗಿದೆ. ಶಾಂತರಸದ ಮೂಲಕ ಶಾಂತಿ ಎಂಬುದು ಕಲೆಯೊಂದಿಗೆ ಸೇರಿಕೊಳ್ಳುತ್ತದೆ. ಇದನ್ನು ಬದುಕಿನ ಎಲ್ಲಾ ವಿಷಯ ಗಳಿಗೂ ಸೇರಿಸಬಹುದು ಎಂದರು.
ಮತ್ತೊಬ್ಬ ಮುಖ್ಯ ಅತಿಥಿ ಕರ್ನಲ್ ಪ್ರಕಾಶ್ ಚಂದ್ರ ಮಾತನಾಡಿದರು. ಸಂಸ್ಥೆಯ ಮುಖ್ಯಸ್ಥ ಪ್ರೊ.ವರದೇಶ ಹಿರೇಗಂಗೆ ಮಾತನಾಡಿ, ವಿಭಾಗವು ಬಹು ವಿಷಯಗಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತದೆ ಎಂದರು.
ಎಂಐಟಿಯ ಜಂಟಿ ನಿರ್ದೇಶಕ ಡಾ.ಸೋಮಶೇಖರ್ ಭಟ್, ಪ್ರೊ.ಫಣಿರಾಜ್, ವಿದ್ವಾನ್ ಭ್ರಮರಿ ಶಿವಪ್ರಕಾಶ್ ಮುಂತಾದವರು ಉಪಸ್ಥಿತ ರಿದ್ದರು.