ಬ್ರಿಟನ್- ಭಾರತ ಬಾಂಧವ್ಯ ಬದಲಾಯಿಸಲು ಆದ್ಯತೆ: ಬ್ರಿಟನ್‌ನ ಪ್ರಧಾನಿ ಅಭ್ಯರ್ಥಿ ರಿಷಿ ಸುನಾಕ್

ಲಂಡನ್, ಆ.೨೩: ಬ್ರಿಟನ್-ಭಾರತ ನಡುವಿನ ದ್ವಿಮುಖ ವಿನಿಮಯಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಉಭಯ ದೇಶಗಳ ನಡುವಿನ ಬಾಂಧವ್ಯವನ್ನು ಬದಲಾಯಿಸಲು ಪ್ರಯತ್ನಿಸುವುದಾಗಿ ಬ್ರಿಟನ್‌ನ ಪ್ರಧಾನಿ ಅಭ್ಯರ್ಥಿ ರಿಷಿ ಸುನಾಕ್ ಮಂಗಳವಾರ ಹೇಳಿದ್ದಾರೆ.
ಇದರಿಂದ ಬ್ರಿಟನ್‌ನ ಸಂಸ್ಥೆಗಳು ಹಾಗೂ ಭಾರತೀಯ ವಿದ್ಯಾರ್ಥಿಗಳಿಗೆ ಸುಲಭ ಪ್ರವೇಶದ ಅವಕಾಶ ಲಭಿಸಲಿದೆ ಎಂದು ಸೋಮವಾರ ಉತ್ತರ ಇಂಗ್ಲೆಂಡಿನಲ್ಲಿ `ಕನ್ಸರ್ವೇಟಿವ್ ಫ್ರೆಂಡ್ಸ್ ಆಫ್ ಇಂಡಿಯಾ(ಸಿಎಫ್‌ಐಎನ್)' ವೇದಿಕೆ ಹಮ್ಮಿಕೊಂಡಿದ್ದ ಪ್ರಚಾರ ಅಭಿಯಾನದಲ್ಲಿ ಪಾಲ್ಗೊಂಡಿದ್ದ ಸುನಾಕ್ ಹೇಳಿದ್ದಾರೆ. ಬಹುತೇಕ ಬ್ರಿಟನ್ ಭಾರತೀಯರೇ ಸೇರಿದ್ದ ಕಾರ್ಯಕ್ರಮದಲ್ಲಿ ಸುನಾಕ್ `ನಮಸ್ತೆ, ಸಲಾಂ, ಖೇಮ್ ಚೋ, ಕಿಡ್ಡಾ' ಹೀಗೆ ವಿವಿಧ ಭಾಷೆಗಳಲ್ಲಿನ ಸಾಂಪ್ರದಾಯಿಕ ಶುಭಾಷಯಗಳನ್ನು ಉಲ್ಲೇಖಿಸಿದರು.
ಭಾರತ- ಬ್ರಿಟನ್ ಸಂಬಂಧ ಮುಖ್ಯವಾಗಿದೆ ಎಂಬುದು ನಮಗೆ ತಿಳಿದಿದೆ. ಎರಡೂ ದೇಶಗಳ ನಡುವಿನ ಜೀವಂತ ಸೇತುವೆಯನ್ನು ಪ್ರತಿನಿಧಿಸುತ್ತಿದ್ದೇವೆ. ಭಾರತದಲ್ಲಿನ ಮಾರುಕಟ್ಟೆ ಹಾಗೂ ಉದ್ಯೋಗವಾಕಾಶದ ಬಗ್ಗೆ ನಮಗೆ ತಿಳಿದಿದೆ. ಆದರೆ ವಾಸ್ತವವಾಗಿ ಈಸಂಬಂಧವನ್ನು ವಿಭಿನ್ನವಾಗಿ ನೋಡಬೇಕಿದೆ. ನಮ್ಮ ವಿದ್ಯಾರ್ಥಿಗಳು ಭಾರತದಲ್ಲಿ ಶಿಕ್ಷಣ ಪಡೆಯಲು, ನಮ್ಮ ಮತ್ತು ಭಾರತದ ಸಂಸ್ಥೆಗಳು ಜತೆಗೂಡಿ ಕೆಲಸ ಮಾಡಲು ಸುಲಭ ಅವಕಾಶಗಳನ್ನು ನಿರ್ಮಿಸಬೇಕು. ಯಾಕೆಂದರೆ ಇದು ಕೇವಲ ಏಕಮುಖ ಸಂಬಂಧವಲ್ಲ, ದ್ವಿಮುಖ ಸಂಬAಧವಾಗಿದೆ ಮತ್ತು ಈ ದ್ವಿಮುಖ ಸಂಬಂಧದಲ್ಲಿ ಬದಲಾವಣೆ ತರುವುದು ನನ್ನ ಉದ್ದೇಶವಾಗಿದೆ ಎಂದರು. ಈ ಮಧ್ಯೆ, ಬ್ರಿಟನ್ ಜನತೆ ಎದುರಿಸುತ್ತಿರುವ ಜೀವನ ವೆಚ್ಚದ ಸಮಸ್ಯೆಯನ್ನು ನಿವಾರಿಸಲು ತೆರಿಗೆ ಕಡಿತ ಮಾಡುವುದಾಗಿ ಪ್ರಧಾನಿ ಹುದ್ದೆಯ ಮತ್ತೋರ್ವ ಅಭ್ಯರ್ಥಿ ಲಿಝ್ ಟ್ರುಸ್ ನೀಡಿರುವ ಭರವಸೆಯನ್ನು ರಿಷಿ ಸುನಾಕ್ ಟೀಕಿಸಿದ್ದಾರೆ.
೫೦ ಬಿಲಿಯನ್ ಪೌಂಡ್ ಮೊತ್ತದ ತೆರಿಗೆ ಕಡಿತ ಮತ್ತು ನೆರವಿನ ಪ್ಯಾಕೇಜ್ ರೂಪಿಸುವುದಾಗಿ ಟ್ರುಝ್ ನೀಡಿರುವ ಭರವಸೆಯು ದೇಶದ ಸಾಲದ ಮೊತ್ತವನ್ನು ಅತ್ಯಂತ ಅಪಾಯಕಾರಿ ಮಟ್ಟಕ್ಕೆ ಕೊಂಡೊಯ್ಯಲಿದೆ. ಟ್ರುಝ್ ಅವರ ಕಾರ್ಯನೀತಿಯು ಆರ್ಥಿಕತೆಯನ್ನು ಹಣದುಬ್ಬರದ ಸುಳಿಯಲ್ಲಿ ಮುಳುಗಿಸಲಿದೆ. ಈ ಬಗ್ಗೆ ಜನತೆ ಜಾಗರೂಕರಾಗಿರಬೇಕು . ವಾಸ್ತವವೆಂದರೆ ಟ್ರುಝ್ ಬೆಂಬಲ ಪ್ಯಾಕೇಜ್ ಅನ್ನು ನೀಡಲು ಸಾಧ್ಯವಿಲ್ಲ ಮತ್ತು ೫೦ ಶತಕೋಟಿ ಪೌಂಡ್ ಮೌಲ್ಯದ ಅನುದಾನ ರಹಿತ, ಶಾಶ್ವತ ತೆರಿಗೆ ಕಡಿತವನ್ನು ಒಂದೇ ಬಾರಿಗೆ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಸುನಾಕ್ ಹೇಳಿದ್ದಾರೆ.
ನೂತನ ಪ್ರಧಾನಿಯನ್ನು ಆಯ್ಕೆ ಮಾಡಲು ಕನ್ಸರ್ವೇಟಿವ್ ಪಕ್ಷದ ಸದಸ್ಯರು ಆನ್‌ಲೈನ್ ಮೂಲಕ ನಡೆಸುವ ಮತದಾನ ಪ್ರಕ್ರಿಯೆ ಸೆಪ್ಟಂಬರ್ ೨ರಂದು ಅಂತ್ಯಗೊಳ್ಳಲಿದೆ.
ಬ್ರಿಟನ್‌ಗೆ ದೊಡ್ಡ ಬೆದರಿಕೆಯೆಂದರೆ ಚೀನಾ
ಚೀನಾದ ಬಗ್ಗೆ ಎದುರಾದ ಪ್ರಶ್ನೆಗೆ ಉತ್ತರಿಸಿದ ರಿಷಿ ಸುನಾಕ್, ಚೀನಾದ ಆಕ್ರಮಣಶೀಲತೆಯ ವಿರುದ್ಧ ಬ್ರಿಟನ್ ಅನ್ನು ರಕ್ಷಿಸುವಲ್ಲಿ ದೃಢ ನಿಲುವಿನ ಅಗತ್ಯತೆಯನ್ನು ಪುನರುಚ್ಚರಿಸಿದರು. ನಮ್ಮ ಅರ್ಥವ್ಯವಸ್ಥೆ ಭದ್ರತೆಗೆ ಎದುರಾಗಿರುವ ಅತೀ ದೊಡ್ಡ ಬೆದರಿಕೆಯನ್ನು ಚೀನಾ ಮತ್ತು ಚೀನಾದ ಕಮ್ಯುನಿಸ್ಟ್ ಪಕ್ಷವು ಪ್ರತಿನಿಧಿಸುತ್ತದೆ. ನಾವು ಈ ವಿಷಯದಲ್ಲಿ ಜಾಗರೂಕರಾಗಿರಬೇಕು. ನಿಮ್ಮ ಪ್ರಧಾನಿಯಾಗಿ ನಾನು ನಿಮ್ಮ, ನಿಮ್ಮ ಕುಟುಂಬ ಮತ್ತು ನಮ್ಮ ದೇಶದ ರಕ್ಷಣೆಗೆ ಅಗತ್ಯವಾಗಿರುವುದನ್ನು ಮಾಡುತ್ತೇನೆ, ಯಾಕೆಂದರೆ ಕನ್ಸರ್ವೇಟಿವ್ ಪ್ರಧಾನಿಯಾಗಿ ಅದು ನನ್ನ ಪ್ರಥಮ ಕರ್ತವ್ಯವಾಗಿದೆ ಎಂದು ಸುನಾಕ್ ಹೇಳಿದ್ದಾರೆ.