ಹುಬ್ಬಳ್ಳಿಯಲ್ಲಿ ‘ಬಿಯಾಂಡ್ ಬೆಂಗಳೂರು' ಸಮಾವೇಶ; ಕೇಂದ್ರ ಸಚಿವ ಜೋಶಿ, ರಾಜೀವ್ ಚಂದ್ರಶೇಖರ್ ಗೆ ಆಹ್ವಾನ

ಹೊಸದಿಲ್ಲಿ, ಆ.23: ಹುಬ್ಬಳ್ಳಿ, ಮೈಸೂರು ಹಾಗೂ ಮಂಗಳೂರಿನಲ್ಲಿ ನಡೆಯಲಿರುವ ‘ಬಿಯಾಂಡ್ ಬೆಂಗಳೂರು' ಸಮಾವೇಶಗಳಿಗೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಮತ್ತು ರಾಜೀವ್ ಚಂದ್ರಶೇಖರ್ ಅವರನ್ನು ಐಟಿ-ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ರಾಜ್ಯ ಸರಕಾರದ ಪರವಾಗಿ ಮಂಗಳವಾರ ಆಹ್ವಾನಿಸಿದರು.
ಸೆ.26ರಂದು ಹುಬ್ಬಳ್ಳಿಯಲ್ಲಿ ಮತ್ತು ಅಕ್ಟೋಬರ್ 19 ಮತ್ತು 20ರಂದು ಮೈಸೂರಿನಲ್ಲಿ ‘ಬಿಯಾಂಡ್ ಬೆಂಗಳೂರು' ಟೆಕ್ ಸಮಾವೇಶ ನಡೆಯಲಿದೆ. ಇವುಗಳನ್ನು ಕ್ರಮವಾಗಿ ಪ್ರಹ್ಲಾದ್ ಜೋಶಿ ಮತ್ತು ರಾಜೀವ್ ಚಂದ್ರಶೇಖರ್ ಉದ್ಘಾಟಿಸಲಿದ್ದಾರೆ. ಆಹ್ವಾನವನ್ನು ಸ್ವೀಕರಿಸಿದ ಕೇಂದ್ರ ಸಚಿವರು ಸಮಾವೇಶಕ್ಕೆ ಬರುವುದಾಗಿ ಹೇಳಿದ್ದಾರೆ ಎಂದು ಅಶ್ವತ್ಥ ನಾರಾಯಣ ತಿಳಿಸಿದರು.
ಹೊಸದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ನಗರದ ಆಚೆಗೂ ರಾಜ್ಯದ ವಿವಿಧ ಭಾಗಗಳಲ್ಲಿ ಕೈಗಾರಿಕೆಗಳು ನೆಲೆಯೂರುವಂತೆ ಮಾಡಲು ರಾಜ್ಯ ಸರಕಾರ ನಿರ್ಧರಿಸಿದೆ. ಇದರ ಭಾಗವಾಗಿ, ನವೆಂಬರ್‍ನಲ್ಲಿ ನಡೆಯಲಿರುವ ಬೆಂಗಳೂರು ತಂತ್ರಜ್ಞಾನ ಸಮಾವೇಶಕ್ಕೂ (ಬಿಟಿಎಸ್) ಮುನ್ನ ಹುಬ್ಬಳ್ಳಿ, ಮೈಸೂರು ಮತ್ತು ಮಂಗಳೂರಿನಲ್ಲಿ ‘ಬಿಯಾಂಡ್ ಬೆಂಗಳೂರು' ಸಮಾವೇಶಗಳನ್ನು ನಡೆಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಈ ಸಮಾವೇಶಗಳಲ್ಲಿ ಉದ್ಯಮಗಳ ಸ್ಥಾಪನೆ ಮತ್ತು ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಗುವುದು. ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಉದ್ಯಮಿಗಳು ಮತ್ತು ಹೂಡಿಕೆದಾರರು ಭಾಗವಹಿಸಲಿದ್ದಾರೆ ಎಂದು ಅಶ್ವತ್ಥ ನಾರಾಯಣ ವಿವರಿಸಿದರು. ಈ ಸಂದರ್ಭದಲ್ಲಿ ತೋಟಗಾರಿಕೆ ಸಚಿವ ಮುನಿರತ್ನ ಉಪಸ್ಥಿತರಿದ್ದರು.







