ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳಿಗೆ ಭವ್ಯ ಸ್ವಾಗತ ನೀಡಿದ್ದು ತಪ್ಪು: ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್

ಮುಂಬೈ, ಆ. 23: ಜೈಲಿನಿಂದ ಬಿಡುಗಡೆಗೊಂಡ ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ 11 ಮಂದಿ ಅಪರಾಧಿಗಳಿಗೆ ಭವ್ಯ ಸ್ವಾಗತ ನೀಡಿರುವುದನ್ನು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರು ಕಟುವಾಗಿ ಟೀಕಿಸಿದ್ದಾರೆ.
ಹಳೆಯ ಕ್ಷಮಾದಾನ ನೀತಿಯ ಅಡಿಯಲ್ಲಿ ಗುಜರಾತ್ ಸರಕಾರ ಸ್ವಾತಂತ್ರ್ಯ ದಿನದಂದು ಈ 11 ಮಂದಿಯನ್ನು ಬಿಡುಗಡೆಗೊಳಿಸಿತ್ತು. ಬಿಜೆಪಿ ಸಿಹಿ ನೀಡಿ ಹಾಗೂ ಹೂಮಾಲೆ ಹಾಕಿ ಸ್ವಾಗತಿಸಿರುವ ಅವರ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಆರೋಪಿ ಆರೋಪಿಯೇ. ಅವರನ್ನು ಸನ್ಮಾನಿಸುವುದನ್ನು ಯಾವುದೇ ರೀತಿಯಲ್ಲಿ ಸಮರ್ಥಿಸಲು ಸಾಧ್ಯವಿಲ್ಲ ಎಂದು ದೇವೇಂದ್ರ ಫಡ್ನವೀಸ್ ಅವರು ಮಂಗಳವಾರ ಹೇಳಿದ್ದಾರೆ.
35 ವರ್ಷದ ಯುವತಿ ಮೇಲೆ ಮೂವರು ವ್ಯಕ್ತಿಗಳು ಲೈಂಗಿಕ ದೌರ್ಜನ್ಯ ಎಸಗಿದ ಭಂಡಾರ ಜಿಲ್ಲೆಯ ಘಟನೆ ಕುರಿತಂತೆ ಮಹಾರಾಷ್ಟ್ರ ವಿಧಾನ ಪರಿಷತ್‌ನಲ್ಲಿ ಚರ್ಚೆ ಸಂದರ್ಭ ಪ್ರತಿಕ್ರಿಯಿಸಿದ ಫಡ್ನವೀಸ್, ಸದನದಲ್ಲಿ ಬಿಲ್ಕಿಸ್ ಬಾನು ಪ್ರಕರಣವನ್ನು ಎತ್ತಲು ಯಾವುದೇ ಕಾರಣ ಇಲ್ಲ ಎಂದರು.
ಸುಪ್ರೀಂ ಕೋರ್ಟ್‌ನ ಆದೇಶದ ಹಿನ್ನೆಲೆಯಲ್ಲಿ ಗುಜರಾತ್‌ನ 2002ರ ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳನ್ನು ಬಿಡುಗಡೆ ಮಾಡಲಾಗಿದೆ. ಆದರೆ, ಅಪರಾಧದ ಆರೋಪಿಯನ್ನು ಗೌರವಿಸಿದರೆ ಅದು ತಪ್ಪು ಹಾಗೂ ಇಂತಹ ಕೃತ್ಯಕ್ಕೆ ಯಾವುದೇ ಸಮರ್ಥನೆ ನೀಡಲು ಸಾಧ್ಯವಿಲ್ಲ ಎಂದು ಫಡ್ನವೀಸ್ ಅವರು ಹೇಳಿದರು.