ಬಾಲಕಿ ಅತ್ಯಾಚಾರ ಪ್ರಕರಣ: ಆರೋಪಿಗೆ 20 ವರ್ಷ ಜೈಲು

ಮಂಡ್ಯ, ಆ.23: 10 ವರ್ಷದ ಬಾಲಕಿ ಮೇಲೆ ಅತ್ಯಾಚಾರ(ತೀವ್ರ ಬೇಧಕ ಲೈಂಗಿಕ ಹಲ್ಲೆ) ಎಸಗಿದ್ದ ವ್ಯಕ್ತಿ ಮೇಲಿನ ಆರೋಪ ಸಾಬೀತಾದ ಹಿನ್ನೆಲೆ ಇಲ್ಲಿನ ಅಧಿಕ ಸತ್ರ ಮತ್ತು ತ್ವರಿತಗತಿ 2ನೇ ನ್ಯಾಯಾಲಯ ಪೊಕ್ಸೋ ಕಾಯಿದೆಯಡಿ 20 ವರ್ಷ ಕಠಿಣ ಸಜೆ ವಿಧಿಸಿ ತೀರ್ಪು ನೀಡಿದೆ.
ಶ್ರೀರಂಗಪಟ್ಟಣ ತಾಲೂಕು ಅರಕೆರೆ ಪೊಲೀಸ್ ಠಾಣೆಯ ಮೊಕದ್ದಮೆ ಸಂಖ್ಯೆ 120/2019ಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ ಈ ತೀರ್ಪು ನೀಡಿದ್ದು, ಆರೋಪಿ ಚೌಡಿಶೆಟ್ಟಿ ಅಲಿಯಾಸ್ ಚೌಡಯ್ಯನಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಚೌಡಶೆಟ್ಟಿಗೆ ಭಾದಂಸಂ ಕಲಂ.354(ಬಿ) ಅಡಿಯಲ್ಲಿನ ಅಪರಾಧಕ್ಕೆ 5 ವರ್ಷ ಕಠಿಣ ಸಜೆ ಮತ್ತು 5,000 ರೂ. ದಂಡ ಮತ್ತು ಭಾದಂಸಂ ಕಲಂ.376(ಎಬಿ) ಹಾಗೂ ಪೊಕ್ಸೋ ಕಾ.ಕಲಂ.6ರ ಅಡಿಯಲ್ಲಿನ ಅಪರಾಧಕ್ಕೆ 20 ವರ್ಷ ಕಠಿಣ ಸಜೆ ಮತ್ತು 50,000 ರೂ.ದಂಡವನ್ನು ವಿಧಿಸಿ ನ್ಯಾಯಾಧೀಶೆ ನಾಗಜ್ಯೋತಿ ಕೆ.ಎ. ತೀರ್ಪು ನೀಡಿದ್ದಾರೆ.
ಅರಕೆರೆ ಪೊಲೀಸರು ಪ್ರಕರಣದ ಬಗ್ಗೆ ತನಿಖೆ ನಡೆಸಿ ಚೌಡಶೆಟ್ಟಿ ವಿರುದ್ಧ ಭಾದಂಸಂ ಕಲಂ.363, 366, 376 (ಎಬಿ) ಭಾದಂಸಂ ಮತ್ತು ಕಲಂ 6ರ ಪೊಕ್ಸೋ ಕಾಯಿದೆ 2012ರ ಅಡಿ ದೋಷಾರೋಪಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಅಭಿಯೋಜನೆಯ ಪರವಾಗಿ ಸರಕಾರಿ ಆಭಿಯೋಜಕಿ ಪಿ.ಕೆ.ಶಕೀಲಾ ಅಬೂಬಕರ್ ವಾದ ಮಂಡಿಸಿದ್ದರು.





