ಬೇನಾಮಿ ವಹಿವಾಟು ವಿರುದ್ಧ ಕಾನೂನು ಕ್ರಮ, ಮುಟ್ಟುಗೋಲು ರದ್ದುಪಡಿಸಿದ ಸುಪ್ರೀಂಕೋರ್ಟ್

ಹೊಸದಿಲ್ಲಿ: ಮಹತ್ವದ ಆದೇಶವೊಂದರಲ್ಲಿ ಭಾರತದ ಸುಪ್ರೀಂಕೋರ್ಟ್ (Supreme Court), ಬೇನಾಮಿ ಆಸ್ತಿ ವಹಿವಾಟು ನಿಷೇಧ ಕಾಯ್ದೆ-1988ರ ಪ್ರಮುಖ ನಿಬಂಧನೆಗಳನ್ನು ಅನೂರ್ಜಿತಗೊಳಿಸಿದೆ. ಜತೆಗೆ ಕಾಯ್ದೆ ಜಾರಿಗೆ ಬಂದ 1988 ರಿಂದ 2016ರವರೆಗೆ ಕೈಗೊಂಡ ಎಲ್ಲ ಕಾನೂನು ಕ್ರಮಗಳನ್ನು ಕೂಡಾ ರದ್ದುಪಡಿಸಿದೆ. ಈ ಕಾನೂನು ವ್ಯಾಪ್ತಿ ಮೀರಿದ್ದು, ತೀರಾ ಕಠಿಣವಾಗಿದೆ ಹಾಗೂ ಸಮರ್ಪಕ ರಕ್ಷಣೆ ಹೊಂದಿಲ್ಲ. ಇದು ಅಸಂವಿಧಾನಿಕ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ ಎಂದು hindustantimes.com ವರದಿ ಮಾಡಿದೆ.
ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಮೂವರು ನ್ಯಾಯಾಧೀಶರ ಪೀಠ ಈ ಐತಿಹಾಸಿಕ ತೀರ್ಪು ನೀಡಿ, 1988ರ ಈ ಕಾನೂನು ಹುಟ್ಟುವ ಮುನ್ನವೇ ಮೃತಪಟ್ಟಿದೆ ಹಾಗೂ ಇದು ಅಸಂವಿಧಾನಿಕ. 2016ರಲ್ಲಿ ತಿದ್ದುಪಡಿಯಾದ ಕಾನೂನನ್ನು ಭವಿಷ್ಯದ ಪ್ರಕರಣಗಳಿಗೆ ಮಾತ್ರ ಅನ್ವಯಿಸಬಹುದೇ ವಿನಃ ಪೂರ್ವಾನ್ವಯವಾಗುವಂತೆ ಬಳಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿಗಳಾದ ಕೃಷ್ಣಮುರಾರಿ ಮತ್ತು ಹಿಮಾ ಕೊಹ್ಲಿ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠ, "2016ರ ತಿದ್ದುಪಡಿ ಕಾಯ್ದೆಗಿಂತ ಮೊದಲು (1988ರ ಸೆಪ್ಟೆಂಬರ್ 5ರಿಂದ 2016ರ ಅಕ್ಟೋಬರ್ 25ರ ಅವಧಿಯಲ್ಲಿ) ನಡೆಸಿದ ಬೇನಾಮಿ ಆಸ್ತಿ ವ್ಯವಹಾರಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಅಪರಾಧ ಕಾನೂನು ಕ್ರಮಗಳನ್ನು ಆರಂಭಿಸುವಂತಿಲ್ಲ ಅಥವಾ ಮುಂದುವರಿಸುವಂತಿಲ್ಲ; ಇವುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆಯೂ ಇಲ್ಲ ಎಂದು ಹೇಳಿದೆ. ಇದರ ಪರಿಣಾಮವಾಗಿ ಎಲ್ಲ ಕಾನೂನು ಕ್ರಮಗಳು ಮತ್ತು ಮುಟ್ಟುಗೋಲು ಪ್ರಕ್ರಿಯೆ ರದ್ದಾಗುತ್ತದೆ ಎಂದು ಹೇಳಿದೆ.
ಮೆಸಸ್ ಗಣಪತಿ ಡೀಲ್‍ಕಾಮ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯ ಮಾಲೀಕರಿಗೆ 2016ರ ಕಾಯ್ದೆಯಡಿ ಕೇಂದ್ರ ಸರ್ಕಾರ ನೀಡಿದ ಶೋಕಾಸ್ ನೋಟೀಸನ್ನು ರದ್ದುಪಡಿಸಿ 2019ರ ಡಿಸೆಂಬರ್ 12ರಂದು ಕೊಲ್ಕತ್ತಾ ಹೈಕೋರ್ಟ್ ನೀಡಿದ ತೀರ್ಪನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ನ್ಯಾಯಪೀಠ ಈ ತೀರ್ಪು ನೀಡಿದೆ. ಕಂಪನಿ 2011ರಲ್ಲಿ ಖರೀದಿಸಿದ ಆಸ್ತಿಗೆ ಸಂಬಂಧಿಸಿದಂತೆ ಕಾಯ್ದೆಯನ್ನು ಪೂರ್ವಾನ್ವಯವಾಗುವಂತೆ ಜಾರಿಗೊಳಿಸಿ ಕ್ರಮ ಕೈಗೊಳ್ಳುವಂತಿಲ್ಲ ಎಂದು ಹೈಕೋರ್ಟ್ ತೀರ್ಪಿನಲ್ಲಿ ಸ್ಪಷ್ಟಪಡಿಸಿತ್ತು.







