ಅತ್ಯಾಚಾರ ಆರೋಪಿ ಜತೆ ಸಂತ್ರಸ್ತೆ ವಿವಾಹ: ಕ್ರಿಮಿನಲ್ ಕೇಸ್ ರದ್ದುಗೊಳಿಸಿದ ಹೈಕೋರ್ಟ್

ಬೆಂಗಳೂರು, ಆ.24: ಅತ್ಯಾಚಾರ ಆರೋಪ ಎದುರಿಸುತ್ತಿದ್ದ 23 ವರ್ಷದ ಯುವಕನ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ಹೈಕೋರ್ಟ್ (High Court of Karnataka) ರದ್ದು ಮಾಡಿದೆ. ಅತ್ಯಾಚಾರ ಎಸಗಿದ ಯುವಕನನ್ನೆ ಸಂತ್ರಸ್ತೆ ಮದುವೆಯಾದ ಹಿನ್ನೆಲೆ ಆತನ ವಿರುದ್ಧದ ಕೇಸ್‍ನ್ನು ನ್ಯಾಯಾಲಯವು ರದ್ದುಗೊಳಿಸಿದೆ.
ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ತೀರ್ಪು ನೀಡಿದೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೋಕ್ಸೊ) ಕಾಯ್ದೆ ಮತ್ತು ಐಪಿಸಿ ಸೆಕ್ಷನ್‍ಗಳ ಅಡಿಯಲ್ಲಿ 23 ವರ್ಷದ ಯುವಕನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
17 ವರ್ಷದ ಸಂತ್ರಸ್ತೆ 18 ವರ್ಷ ತುಂಬಿದ ನಂತರ ಆರೋಪಿಯನ್ನೇ ಮದುವೆಯಾಗಿದ್ದಳು ಮತ್ತು ಸೆಷನ್ಸ್ ಕೋರ್ಟ್‍ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ದಂಪತಿಗೆ ಮಗು ಕೂಡ ಆಗಿದೆ. ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಅರ್ಜಿದಾರರ ವಿರುದ್ಧದ ತಪ್ಪನ್ನು ಸಾಬೀತುಪಡಿಸಲು ಕಷ್ಟವಾಗುತ್ತದೆ ಎಂದು ಹೈಕೋರ್ಟ್ ತಿಳಿಸಿದೆ.
ಸಂತ್ರಸ್ತ ಯುವತಿ ನಂತರದ ಸಮಯದಲ್ಲಿ ವಿಚಾರಣೆಯಲ್ಲಿ ಪ್ರತಿಕೂಲವಾಗಿ ತಿರುಗಿದರೆ, ಅರ್ಜಿದಾರನು ಎಲ್ಲ ಅಪರಾಧಗಳಿಂದ ಮುಕ್ತಗೊಳ್ಳುತ್ತಾನೆ. ಇದು ನೋವಿನ ಅಂತಿಮ ಫಲಿತಾಂಶವಲ್ಲ. ಆದರೆ, ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿನ ಪ್ರಕ್ರಿಯೆಯು ಅಂತಹ ನೋವನ್ನು ಉಂಟುಮಾಡುತ್ತದೆ ಎಂದು ನ್ಯಾಯಾಲಯವು ತಿಳಿಸಿದೆ.
ಪ್ರಾಸಿಕ್ಯೂಷನ್‍ನ ವಿರೋಧವನ್ನು ನಿರ್ಲಕ್ಷಿಸಿದ ಹೈಕೋರ್ಟ್, ಕಕ್ಷಿದಾರರ ಮತ್ತು ಸಂತ್ರಸ್ತೆಯ ನಡುವಿನ ಒಪ್ಪಂದವನ್ನು ಅಂಗೀಕರಿಸುವುದು ಮತ್ತು ಪ್ರಕ್ರಿಯೆಗಳನ್ನು ಕೊನೆಗೊಳಿಸುವುದು ಸೂಕ್ತ ಹಾಗೂ ಮದುವೆಯಾಗಿ ಮಗುವನ್ನು ಬೆಳೆಸುತ್ತಿರುವ ದಂಪತಿಗಳಿಗೆ ನ್ಯಾಯಾಲಯವು ತನ್ನ ಬಾಗಿಲುಗಳನ್ನು ಮುಚ್ಚಿದರೆ, ಇಡೀ ಪ್ರಕ್ರಿಯೆಯು ನ್ಯಾಯಾಂಗ ವ್ಯವಸ್ಥೆಯ ತಪ್ಪಿಗೆ ಕಾರಣವಾಗುತ್ತದೆ ಎಂದು ನ್ಯಾಯಪೀಠವು ತೀರ್ಪು ನೀಡುವಾಗ ತಿಳಿಸಿದೆ.
ಸಂತ್ರಸ್ತೆಯ ತಂದೆ ತನ್ನ ಅಪ್ರಾಪ್ತ ಮಗಳು ಕಾಣೆಯಾಗಿದ್ದಾಳೆ ಎಂದು ಮಾರ್ಚ್ 2019 ರಲ್ಲಿ ದೂರು ದಾಖಲಿಸಿದ್ದರು. ಆದರೆ, ಆರೋಪಿಯೊಂದಿಗೆ ಬಾಲಕಿ ನಂತರ ಪತ್ತೆಯಾಗಿದ್ದರು. ಇಬ್ಬರೂ ಒಮ್ಮತದಿಂದ ನಡೆದುಕೊಂಡಿದ್ದೇವೆ ಎಂಬ ಹೇಳಿಕೆಯನ್ನು ನೀಡಿದ್ದರು. ಆದರೆ, ಬಾಲಕಿಗೆ ಕೇವಲ 17 ವರ್ಷ ಆಗಿದ್ದರಿಂದ ಆರೋಪಿ ವಿರುದ್ಧ ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. 18 ತಿಂಗಳ ಕಾಲ ಕಾರಾಗೃಹದಲ್ಲಿದ್ದ ಆರೋಪಿಗೆ ಬಳಿಕ ಜಾಮೀನು ನೀಡಲಾಗಿತ್ತು. ಆರೋಪಿಯ ಬಿಡುಗಡೆಯ ನಂತರ, ದಂಪತಿಗಳು ನವೆಂಬರ್ 2020 ರಲ್ಲಿ ವಿವಾಹವಾದರು. ಒಂದು ವರ್ಷದ ನಂತರ, ಅವರಿಗೆ ಹೆಣ್ಣು ಮಗುವಾಗಿದೆ.
ತನ್ನ ತೀರ್ಪಿನಲ್ಲಿ, ಸಂತ್ರಸ್ತೆ ಮತ್ತು ಆರೋಪಿ ವಿವಾಹವಾದ ನಂತರ, ಹಲವಾರು ಸಾಂವಿಧಾನಿಕ ನ್ಯಾಯಾಲಯಗಳು ಆರೋಪಿಗಳ ವಿರುದ್ಧದ ಬಾಕಿಯಿರುವ ವಿಚಾರಣೆಯನ್ನು ಮುಕ್ತಾಯಗೊಳಿಸಿರುವುದನ್ನು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.







