ಕಮಿಷನ್ ಆರೋಪದ ಬಗ್ಗೆ ದಾಖಲೆಗಳಿದ್ದರೆ ಲೋಕಾಯುಕ್ತಕ್ಕೆ ದೂರು ಕೊಡಲಿ: ಸಿಎಂ ಬೊಮ್ಮಾಯಿ

ಬೆಂಗಳೂರು, ಆ. 24: ‘ರಾಜ್ಯ ಸರಕಾರದ ವಿವಿಧ ಇಲಾಖೆಗಳ ಕಾಮಗಾರಿಗಳಲ್ಲಿ ಕಮಿಷನ್‍ಗೆ ಬೇಡಿಕೆ ಇಡುತ್ತಿರುವ ಬಗ್ಗೆ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಅವರ ಬಳಿ ದಾಖಲೆಗಳಿದ್ದರೆ ದೂರು ನೀಡಲಿ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರ ಸಂಘ ನಮ್ಮ ಬಳಿ ಬಂದಿಲ್ಲ. ಕೆಲವು ಗುತ್ತಿಗೆದಾರರು ವಿಪಕ್ಷ ನಾಯಕ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ್ದಾರೆ ಅಷ್ಟೇ. ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಈ ಹಿಂದೆ ಆರೋಪ ಮಾಡಿದ ಎಲ್ಲದಕ್ಕೂ ಸರಕಾರ ಕ್ರಮ ಜರುಗಿಸಿದೆ' ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ... ಸಿಎಂ, ಸಚಿವರು, ಶಾಸಕರಿಂದ ಶೇ.40 ಕಮಿಷನ್ ಗೆ ಬೇಡಿಕೆ: ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪ
‘ಗುತ್ತಿಗೆದಾರರ ಸಂಘದಿಂದ ದೂರು ಏನೇ ಇದ್ದರೂ ಲೋಕಾಯುಕ್ತ ಸಂಸ್ಥೆಗೆ ದೂರು ನೀಡಲಿ. ಅವರು ತನಿಖೆ ನಡೆಸಿ ಕ್ರಮ ಕೈಗೊಳ್ಳಲಿದ್ದಾರೆ. ಭ್ರಷ್ಟಾಚಾರ ಆರೋಪದ ಪುರಾವೆಗಳ ಜೊತೆಗೆ ದೂರು ಸಲ್ಲಿಸಲಿ. ಪ್ರಧಾನಿಯವರಿಗೆ ಪತ್ರ ಬರೆಯುವ ಅವಕಾಶ ಎಲ್ಲರಿಗೂ ಇದೆ. ಏನಾದರೂ ತೊಂದರೆ ಇದ್ದರೆ ದೂರು ಕೊಡುವ ವ್ಯವಸ್ಥೆಯೂ ಇದೆ. ದೂರು ಕೊಡಲಿ. ತನಿಖೆ ನಡೆಯಲಿದೆ' ಎಂದು ಅವರು ವಿವರಣೆ ನೀಡಿದರು.







