ಬೆಂಗಳೂರು: ಕೋವಿಡ್‍ನಿಂದ ಮೃತಪಟ್ಟವರ ಕುಟುಂಬದ ಸದಸ್ಯರಿಗೆ ಪರಿಹಾರ ಧನ ಬಿಡುಗಡೆಗೆ ಆಗ್ರಹ

ಬೆಂಗಳೂರು, ಆ.24: ಗಾಂಧಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೋವಿಡ್‍ನಿಂದ ಮೃತಪಟ್ಟವರ ಕುಟುಂಬ ಸದಸ್ಯರು ಮೊದಲ ಹಂತದಲ್ಲಿ ಅರ್ಜಿ ಸಲ್ಲಿಸಿ ಚೆಕ್ ರೂಪದಲ್ಲಿ ಹಾಗೂ ನೇರ ಹಣ ವರ್ಗಾವಣೆ ಮೂಲಕ ಪರಿಹಾರ ಪಡೆದಿದ್ದಾರೆ. ಆದರೆ ಎರಡನೇ ಹಂತದಲ್ಲಿ ಮೃತಪಟ್ಟ 98 ಜನರ ಕುಟುಂಬ ಸದಸ್ಯರು ಪರಿಹಾರದ ಧನಕ್ಕಾಗಿ ಅರ್ಜಿ ಸಲ್ಲಿಸಿ, ಸೂಕ್ತ ದಾಖಲೆಗಳನ್ನು ಒದಗಿಸಿದ್ದರೂ ಈವರೆಗೆ ಅವರಿಗೆ ಪರಿಹಾರ ಸಿಕ್ಕಿಲ್ಲ ಎಂದು ಸ್ಥಳೀಯ ಶಾಸಕ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಬುಧವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಪಶ್ಚಿಮ ವಲಯದ ಜಂಟಿ ಆಯುಕ್ತರಿಗೆ ಈ ಸಂಬಂಧ ಮನವಿ ಪತ್ರ ಸಲ್ಲಿಸಿದ್ದ ದಿನೇಶ್ ಗುಂಡೂರಾವ್, ಸ್ವತಃ ನಾನೇ ಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸಹಕಾರದೊಂದಿಗೆ ವಾರ್ಡ್‍ವಾರು ಸಭೆ ನಡೆಸಿ, ಪರಿಹಾರ ಧನ ಪಡೆಯಲು ಅರ್ಜಿ ನಮೂನೆ ಹಾಗೂ ದಾಖಲೆ ಸಲ್ಲಿಸಲು ನೆರವು ನೀಡಿದ್ದೇನೆ ಎಂದು ಹೇಳಿದ್ದಾರೆ.
98 ಫಲಾನುಭವಿಗಳು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿ ಈಗಾಗಲೇ ಹಲವು ತಿಂಗಳುಗಳೇ ಕಳೆದು ಹೋಗಿವೆ. ಆದರೂ 98 ಫಲಾನುಭವಿಗಳಿಗೆ ಪರಿಹಾರದ ಧನ ಬಿಡುಗಡೆಯಾಗಿಲ್ಲ. ಈ ಬಗ್ಗೆ ನಾನು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಹಲವಾರು ಬಾರಿ ದೂರವಾಣಿ ಕರೆ ಮಾಡಿ ಪರಿಹಾರದ ಧನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇನೆ. ಇಷ್ಟಾದರೂ ಸರಕಾರದಿಂದ ಯಾವುದೇ ಪರಿಹಾರ ದೊರೆತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಕೋವಿಡ್‍ನಿಂದ ಮನೆಯ ಕುಟುಂಬದ ಸದಸ್ಯರನ್ನು ಕಳೆದುಕೊಂಡವರ ಕಷ್ಟಕ್ಕೆ ಸ್ಪಂದಿಸಬೇಕಾದದ್ದು ಸರಕಾರದ ಕರ್ತವ್ಯ. ಆದರೆ ರಾಜ್ಯ ಸರಕಾರ ಬಡವರ ವಿಚಾರದಲ್ಲಿ ಅತ್ಯಂತ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ. ಪರಿಹಾರ ನೀಡುವಂತೆ ನ್ಯಾಯಾಲಯವೇ ಸೂಚನೆ ನೀಡಿದೆ. ಆದರೂ ಈ ಸರಕಾರಕ್ಕೆ ಬಡವರ ನೋವು ಕೇಳುತ್ತಿಲ್ಲ. ಸರಕಾರದ ಧೋರಣೆ ನೋಡಿದರೆ ಪರಿಹಾರ ನೀಡಲೂ ಸರಕಾರದ ಖಜಾನೆಯಲ್ಲಿ ಹಣವಿಲ್ಲವೆ ಎಂಬ ಅನುಮಾನ ಮೂಡುತ್ತಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ಕೋವಿಡ್‍ನಿಂದ ಮೃತಪಟ್ಟ 98 ಕುಟುಂಬದ ಸದಸ್ಯರು ಪರಿಹಾರಕ್ಕಾಗಿ ಅಧಿಕಾರಿಗಳ ಬಳಿ ದುಂಬಾಲು ಬೀಳುವ ಪರಿಸ್ಥಿತಿ ಎದುರಾಗಿದೆ. ಜೊತೆಗೆ ಪ್ರತಿನಿತ್ಯ ನನ್ನ ಕಚೇರಿಗೂ ಆಗಮಿಸಿ ಪರಿಹಾರ ಕೊಡಿಸುವಂತೆ ಒತ್ತಡ ಹೇರುತ್ತಿದ್ದಾರೆ. ಕೋವಿಡ್ ಸೋಂಕಿನಿಂದ ಮೃತಪಟ್ಟ ಕುಟುಂಬ ಬಡತನ ರೇಖೆಗಿಂತ ಕೆಳಗಿದ್ದು ಅತ್ಯಂತ ಸಂಕಷ್ಟದಲ್ಲಿದ್ದಾರೆ ಎಂದು ಅವರು ಹೇಳಿದರು.
ನನ್ನ ಮತಕ್ಷೇತ್ರದ ಅರ್ಹ 98 ಫಲಾನುಭವಿಗಳ ಬೇಡಿಕೆಯನ್ನು ಸರಕಾರ ಮಾನವೀಯ ದೃಷ್ಟಿಯಿಂದ ಪರಿಗಣಿಸಿ ಪರಿಹಾರ ನೀಡಬೇಕು ಎಂದು ದಿನೇಶ್ ಗುಂಡೂರಾವ್, ಜಂಟಿ ಆಯುಕ್ತರು ಹಾಗೂ ಹಣಕಾಸು ವಿಭಾಗದ ಅಧಿಕಾರಿಗಳನ್ನು ಒತ್ತಾಯಿಸಿದರು.
ಕೋವಿಡ್-19 ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಕುಟುಂಬದ ವಾರಸುದಾರರಿಗೆ ಹಾಗೂ ಬಡತನ ರೇಖೆಗಿಂತ ಕೆಳಗಿನ ಕುಟುಂಬದ ಕಾನೂನುಬದ್ಧ ವಾರಸುದಾರರಿಗೆ ಸಂಧ್ಯಾ ಸುರಕ್ಷಾ ಯೋಜನೆಯಡಿ ಒಂದು ಲಕ್ಷ ರೂ. ಮತ್ತು ರಾಜ್ಯ ವಿಪತ್ತು ಪರಿಹಾರ ನಿಧಿ(ಎಸ್‍ಡಿಆರ್‍ಎಫ್)ಯಡಿ 50 ಸಾವಿರ ರೂ.ಪಾವತಿಸುವಂತೆ ಸರಕಾರದಿಂದ ಆದೇಶವಾಗಿದೆ.
-ದಿನೇಶ್ ಗುಂಡೂರಾವ್, ಶಾಸಕ







