ಕುಂದಾಪುರ; ರಾ.ಹೆ.66ರ ಫ್ಲೈಓವರ್‌ನಲ್ಲಿ ಪ್ರವಹಿಸುತ್ತಿರುವ ವಿದ್ಯುತ್!

ಕುಂದಾಪುರ : ಕುಂದಾಪುರದ ಶಾಸ್ತ್ರಿ ವೃತ್ತದ ಮೇಲ್ಬಾಗದ ಫ್ಲೈ ಓವರ್ ನಲ್ಲಿ ದಾರಿದೀಪಗಳಿಗೆ ಸಂಪರ್ಕಿಸಲಾದ ವಿದ್ಯುತ್ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪ್ರವಹಿಸುತ್ತಿರುವುದು ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ವೈರಲ್ ಆಗಿದ್ದು, ತಕ್ಷಣವೇ ಕಾರ್ಯಪ್ರವೃತರಾದ ಮೆಸ್ಕಾಂ ಇಲಾಖೆ ಹೆದ್ದಾರಿ ದಾರಿದೀಪದ ವಿದ್ಯುತ್ ಸಂಪರ್ಕವನ್ನು ಖಡಿತಗೊಳಿಸಿದೆ.
ಚತುಷ್ಪಥ ಕಾಮಗಾರಿ ಗುತ್ತಿಗೆ ಪಡೆದ ನವಯುಗ ಕಂಪೆನಿಯು ಕೆಲ ತಿಂಗಳ ಹಿಂದೆ ಇಲ್ಲಿನ ದಾರಿದೀಪಗಳಿಗೆ ಸಂಪರ್ಕ ಕಲ್ಪಿಸಿತ್ತು. ಮಳೆಯ ಹಿನ್ನೆಲೆಯಲ್ಲಿ ವಾಹನ ಸವಾರರು ಫ್ಲೈಓವರ್ ಮೇಲೆ ನಿಂತಿದ್ದ ಸಂದರ್ಭ ಫ್ಲೈಓವರ್ ತಡೆ ಗೋಡೆ ಭೀಮ್‌ನಲ್ಲಿ ಒಂದು ಕಡೆ ವಿದ್ಯುತ್ ಪ್ರವಹಿಸುತ್ತಿರುವ ಅನುಭವ ವಾಯಿತು. ಕೂಡಲೇ ಟೆಸ್ಟರ್ ತಂದು ಪರಿಶೀಲಿಸಿದಾಗ ಟೆಸ್ಟರ್‌ನಲ್ಲಿ ಬೆಳಕು ಬಂದಿದ್ದು ವಿದ್ಯುತ್ ಪ್ರವಹಿಸುತ್ತಿರುವುದು ಖಾತ್ರಿಯಾಗಿದೆ.
ಕೂಡಲೇ ಎಚ್ಚೆತ್ತುಕೊಂಡ ಮೆಸ್ಕಾಂ ಇಲಾಖೆಯವರು ರಾಷ್ಟ್ರೀಯ ಹೆದ್ದಾರಿ ದಾರಿದೀಪದ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಸಂಭವ್ಯ ಅವಘಡ ತಪ್ಪಿಸಿದ್ದಾರೆ. ವಿದ್ಯುತ್ ಸಂಪರ್ಕ ಕಲ್ಪಿಸುವ ವೇಳೆ ವಯರಿಂಗ್‌ನಲ್ಲಿ ಉಂಟಾದ ತಾಂತ್ರಿಕ ಸಮಸ್ಯೆಯಿಂದ ಈ ರೀತಿಯಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
‘ಹೆದ್ದಾರಿ ದಾರಿದೀಪದ ನಿರ್ವಹಣೆ ನವಯುಗ ಕಂಪೆನಿ ಮಾಡಬೇಕಿರುವುದ ರಿಂದ ಅವರಿಗೆ ಸೂಚನೆ ನೀಡಲಾಗಿದ್ದು ತಕ್ಷಣ ಸಮಸ್ಯೆ ಪರಿಹರಿಸುವ ಬಗ್ಗೆ ಆದೇಶ ನೀಡಲಾಗಿದೆ’ ಎಂದು ಕುಂದಾಪುರ ಉಪ ವಿಭಾಗಾಧಿಕಾರಿ ಕೆ. ರಾಜು ತಿಳಿಸಿದ್ದಾರೆ.







