ಶಿವಮೊಗ್ಗದಲ್ಲಿ ಕೋಮು ಗಲಭೆ ಸೃಷ್ಟಿಸುವ ಸಂಚಿನ ಕುರಿತ ಅನಾಮಧೇಯ ಪತ್ರ ಪತ್ತೆ: ಪ್ರಕರಣದ ಸತ್ಯಾಂಶ ಪೊಲೀಸರಿಂದ ಬಹಿರಂಗ
ಓರ್ವ ಆರೋಪಿಯ ಬಂಧನ

ಶಿವಮೊಗ್ಗ, ಆ.24: ಶಿವಮೊಗ್ಗದಲ್ಲಿ (Shivamogga) ಭಾರೀ ಕೋಮು ಗಲಭೆ ಸೃಷ್ಟಿಸಲು ಸಂಚು ನಡೆಯುತ್ತಿದೆ ಎಂಬ ಒಕ್ಕಣೆ ಹೊಂದಿರುವ ಅಪರಿಚಿತರು ಬರೆದ ಪತ್ರವೊಂದು ಪತ್ತೆಯಾದ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದ್ದು, ಆರೋಪಿಯನ್ನು ಬಂಧಿಸಿರುವ ಪೊಲೀಸರು ಜನರ ಆತಂಕ ದೂರ ಮಾಡಿದ್ದಾರೆ.
ನಗರದ ಗಾಂಧಿ ಬಝಾರ್‌ನ ಗಂಗಪರಮೇಶ್ವರಿ ದೇವಸ್ಥಾನದ ಬಳಿ ಪತ್ತೆಯಾದ ಪತ್ರವೊಂದರಲ್ಲಿ ಗಣಪತಿ ಹಬ್ಬದ ಸಂದರ್ಭ ನಗರದಲ್ಲಿ ಮೂವರ ಕೊಲೆಗೆ ಸಂಚು ರೂಪಿಸಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ದೇವಸ್ಥಾನದ ಪಕ್ಕದಲ್ಲಿದ್ದ ಅಂಗಡಿ ಮಾಲಕರೊಬ್ಬರು ಬಾಗಿಲು ಮುಚ್ಚುವ ವೇಳೆ ಖಾಕಿ ಬಣ್ಣದ ಕವರ್ ಪತ್ತೆಯಾಗಿದೆ. ಲಕೋಟೆಯ ಮೇಲೆ ಪೊಲೀಸ್ ಇಲಾಖೆಗೆ ಈ ಪತ್ರ ಕೊಟ್ಟು ಕೋಮುಗಲಭೆ ತಪ್ಪಿಸಿ ಮತ್ತು ಮೂವರ ಪ್ರಾಣವನ್ನ ಉಳಿಸಿ ಎಂದು ಬರೆಯಲಾಗಿದೆ.
'ಒಬ್ಬ ವ್ಯಾಪಾರಿಯನ್ನು ಅರ್ಧಂಬರ್ಧ ಕೊಲೆ ಮಾಡಲಾಗಿದೆ. ಆತನನ್ನು ಸಂಪೂರ್ಣ ತೆಗೆಯಬೇಕು. ಇನ್ನೊಬ್ಬ ವ್ಯಾಪಾರಿಯನ್ನು ಉದ್ದಿಮೆದಾರ ಹಾಗೂ ಹರ್ಷನ ಸಹಚರನನ್ನು ಕೊಲೆ ಮಾಡುವ ಯೋಜನೆಯಿದೆ. ಮಾರುಕಟ್ಟೆಯಲ್ಲಿ ಶೌಚಾಲಯದ ಬಳಿ ಮೂವರು ಗಾಂಜಾ ಸೇದುವವರು ಈ ಬಗ್ಗೆ ಮಾತನಾಡಿಕೊಂಡಿದ್ದಾರೆ. ಮೂವರನ್ನು ಮಂಗಳೂರಿನಿಂದ ಕರೆಯಿಸಬೇಕು. ಅವರು ಮೊಬೈಲ್ ಫೋನ್ ಬಳಸಬಾರದು. ಯಾವುದೇ ಕಾರಣಕ್ಕ ಸ್ಥಳೀಯವಾಗಿ ಯಾರಿಗೂ ಈ ಬಗ್ಗೆ ತಿಳಿಯಬಾರದು ಗಲಾಟೆ ನಡೆದರೇ ಈ ಹಬ್ಬದ ಆಚರಣೆ ತಡೆಯಲು ಸಾಧ್ಯ ಎಂದು ಮೂವರು ಯುವಕರು ಮಾತನಾಡಿಕೊಂಡಿರುವುದನ್ನು ಕೇಳಿಸಿಕೊಂಡು ಭಯಭೀತನಾಗಿದ್ದೇನೆ' ಎಂದು ಪತ್ರದಲ್ಲಿ ಬರೆಯಲಾಗಿದೆ.
'ಮುಹ್ಮದ್ ಫೈಝಲ್ ಯಾನೆ ಚೆನ್ನು ಎಂಬಾತ ಈ ಗುಂಪಿನಲ್ಲಿದ್ದ. ಈತ ಗಾಂಜಾ ಮಾರುವುದು, ಗಾಂಜಾ ಸೇವನೆಯನ್ನೂ ಮಾಡುತ್ತಾನೆ. ಈತ ಆಝಾದ್ ನಗರದಲ್ಲಿ ರೌಡಿಯಂತೆ ವರ್ತಿಸುತ್ತಾನೆ' ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಫೈಝಲ್‌ನನ್ನು ಪೊಲೀಸರು ವಿಚಾರಿಸಬೇಕು. ಪತ್ರ ಬರೆದ ಅಪರಿಚತನನ್ನು ಪತ್ತೆಹಚ್ಚಬೇಕು ಎಂದು ಪತ್ರ ದೊರೆತ ಅಂಗಡಿ ಮಾಲಕರು ದೂರು ನೀಡಿದ್ದು, ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣಕ್ಕೆ ತಿರುವು: ಈ ಅನಾಮದೇಯ ಪತ್ರದ ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಸೂಳೆಬೈಲಿನ ಅಯೂಬ್ ಎಂಬಾತನನ್ನು ಬಂಧಿಸಿದ್ದಾರೆ.
ಆರೋಪಿಯೇ ಈ ಪತ್ರ ಬರೆದಿರುವುದು ತಿಳಿದು ಬಂದಿದ್ದು, ಅದೇ ಊರಿನ ಫೈಝಲ್ ಎಂಬಾತನ ಪತ್ನಿಯನ್ನು ಅಯೂಬ್ ಎಂಬಾತ ಪ್ರೀತಿಸುತಿದ್ದ ಎನ್ನಲಾಗಿದೆ. ಕಳೆದ ನಾಲ್ಕು ವರ್ಷಗಳ ಹಿಂದೆ ಇವರಿಬ್ಬರ ಮದುವೆಯಾಗಿದ್ದು, ಫೈಝಲ್ ನನ್ನು ಜೈಲಿಗೆ ಕಳುಹಿಸಿ ಆತನ ಪತ್ನಿ ಜೊತೆಗಿರಬಹುದು ಎಂಬ ಯೋಜನೆ ಮಾಡಿದ್ದ. ಅದಕ್ಕೆ ಸರಿಯಾಗಿ ಶಿವಮೊಗ್ಗದಲ್ಲಿ ಸಾವರ್ಕರ್ ಭಾವಚಿತ್ರ ವಿಚಾರದಲ್ಲಿ ಉಂಟಾದ ಗಲಭೆಯನ್ನು ಫೈಝಲ್ ಮೇಲೆ ಹಾಕಿ ಗಣೇಶ ಹಬ್ಬದ ಸಂದರ್ಭ ಕೋಮು ಗಲಭೆ ಎಬ್ಬಿಸುವ ರೀತಿಯಲ್ಲಿ ಏನಾದರು ಮಾಡಬೇಕೆಂದು ಸಂಚು ರೂಪಿಸಿ ಅಯೂಬ್ ಪತ್ರ ಬರೆದು ಜೈಲಿಗಟ್ಟುವ ಪ್ಲಾನ್ ಮಾಡಿದ್ದ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಸಾವರ್ಕರ್ ಗೋಮಾಂಸ ತಿನ್ನುತ್ತಿದ್ದರು: ಪ್ರಿಯಾಂಕ್ ಖರ್ಗೆ







