ದ.ಕ.ಜಿಲ್ಲಾದ್ಯಂತ ಉತ್ತಮ ಮಳೆ; ಗುರುವಾರ ಯೆಲ್ಲೋ ಅಲರ್ಟ್: ಹವಾಮಾನ ಇಲಾಖೆ

ಮಂಗಳೂರು: ಕೆಲವು ದಿನಗಳಿಂದ ಬಿಡುವು ಪಡೆದಿದ್ದ ಮಳೆಯು ಬುಧವಾರ ಬಿರುಸು ಪಡೆದಿದ್ದು, ದ.ಕ. ಜಿಲ್ಲಾದ್ಯಂತ ಉತ್ತಮ ಮಳೆಯಾಗಿದೆ. ಮುಂಜಾನೆಯಿಂದ ಸುರಿಯತೊಡಗಿದ ಮಳೆಯು ರಾತ್ರಿವರೆಗೂ ಮುಂದುವರಿದಿತ್ತು.
ನಗರ ಮತ್ತು ಗ್ರಾಮೀಣ ಹಾಗೂ ಘಟ್ಟದ ತಪ್ಪಲು ಪ್ರದೇಶ ಸಹಿತ ಜಿಲ್ಲಾದ್ಯಂತ ಸತತ ಮಳೆಯಾಗಿದೆ. ಗುರುವಾರವೂ ದ.ಕ.ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಹವಾಮಾನ ಇಲಾಖೆಯು ಘೋಷಿಸಿದೆ.
ಬಂಗಾಳ ಕೊಲ್ಲಿಯಲ್ಲಿ ಉಂಟಾಗಿದ್ದ ವಾಯುಭಾರ ಕುಸಿತದಿಂದ ಬುಧವಾರ ಉತ್ತಮ ಮಳೆಯಾಗಿದೆ ಎಂದು ಹವಾಮಾನ ಇಲಾಖೆಯು ತಿಳಿಸಿದೆ.
ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣದೊಂದಿಗೆ ಮಳೆ ಬಿರುಸು ಪಡೆಯಿತು. ಸುಳ್ಯ ತಾಲೂಕಿನ ಹಲವೆಡೆ ಮಧ್ಯಾಹ್ನ ಜಡಿ ಮಳೆಯಾಗಿದೆ. ಇದರಿಂದ ಚರಂಡಿಗಳು ತುಂಬಿ ಹರಿದಿದ್ದು, ರಸ್ತೆಗಳಲ್ಲೇ ಕೆಸರು ನೀರು ತುಂಬಿ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಸಮುದ್ರದಲ್ಲಿ ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆ ಇದೆ. ಹಾಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
Next Story