ಹಿರಿಯ ಸಾಹಿತಿ ಡಾ. ಜ್ಯೋತ್ಸ್ನಾ ಕಾಮತ್ ನಿಧನ

ಡಾ. ಜ್ಯೋತ್ಸ್ನಾ ಕಾಮತ್
ಬೆಂಗಳೂರು, ಆ.24: ಹಿರಿಯ ಸಾಹಿತಿ, ಆಕಾಶವಾಣಿಯ ನಿವೃತ್ತ ಅಧಿಕಾರಿಯಾಗಿದ್ದ ಡಾ. ಜ್ಯೋತ್ಸ್ನಾ ಕಾಮತ್(85) ಬುಧವಾರದಂದು ನಿಧನರಾಗಿದ್ದಾರೆ.
ಅವರ ಪತಿ ಡಾ.ಕೃಷ್ಣಾನಂದ ಕಾಮತ ಹಾಗೂ ಮಗ ವಿಕಾಸ್ ಕಾಮತ್ ಅವರನ್ನು ಅವರು ಅಗಲಿದ್ದಾರೆ. ಅವರ ಪತಿ ಡಾ.ಕೃಷ್ಣಾನಂದ ಕಾಮತ ಕನ್ನಡ ಸಾಹಿತ್ಯದ ಪ್ರಸಿದ್ಧ ಬರಹಗಾರರಾಗಿದ್ದಾರೆ.
ಕನ್ನಡದ ಹಿರಿಯ ಸಾಹಿತಿ, ವಿದ್ವಾಂಸರು ಮತ್ತು ಸಂಶೋಧಕಿಯಾಗಿದ್ದ ಅವರು, ಕನ್ನಡ, ಇಂಗ್ಲೀಷ್ ಮೊದಲಾದ 8 ಭಾಷೆಗಳಲ್ಲಿ ಪ್ರೌಢಿಮೆ ಗಳಿಸಿದ್ದರು. ಅವರು 22ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದು, ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಅವರ ಪ್ರಕಟಿತ ಕೃತಿಗಳು ಮೂರು ಭಾಷೆಗಳಿಗೆ ಭಾಷಾಂತರಗೊಂಡಿದ್ದು, ಇತಿಹಾಸ, ಜಾನಪದ ಮತ್ತು ಹಾಸ್ಯ ಅವರ ಮೆಚ್ಚಿನ ವಿಷಯಗಳಾಗಿದ್ದವು.
ಅವರು ಧಾರವಾಡ, ಕೋಲ್ಕತ, ಜೈಪುರ್, ಮುಂಬಯಿ, ಮೈಸೂರು ಸೇರಿ ಬೆಂಗಳೂರು ನಗರಗಳ ಆಕಾಶವಾಣಿ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿ ಕೊನೆಗೆ ಬೆಂಗಳೂರು ಆಕಾಶವಾಣಿಯಲ್ಲಿ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸಿ 1994ರಲ್ಲಿ ನಿವೃತ್ತಿ ಹೊಂದಿದರು. ಅವರು ಆಕಾಶವಾಣಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಬಿತ್ತರಗೊಂಡ ಎರಡು ಕಾರ್ಯಕ್ರಮಗಳನ್ನು- ‘ಗಾಂಧಿ-ಒಂದು ಪುನರ್ದರ್ಶನ' ಮತ್ತು 'ಹಿರಿಯರ ಯುಗಾದಿ ಮೇಳ' ಎಂಬ ಶೀರ್ಷಿಕೆಯಡಿ ಪುಸ್ತಕರೂಪದಲ್ಲೂ ಪ್ರಕಟಿಸಿದ್ದಾರೆ.







