ನಿಂದನೆ ಪ್ರಕರಣಕ್ಕೆ ಸಂಬಂಧಿಸಿ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗೆ ಹೈಕೋರ್ಟ್ ಸಮನ್ಸ್

ಇಸ್ಲಮಾಬಾದ್, ಆ.24: ಕಳೆದ ವಾರಾಂತ್ಯ ನಡೆದ ರ್ಯಾಲಿಯಲ್ಲಿ ನ್ಯಾಯಾಧೀಶರಿಗೆ ಮೌಖಿಕ ಬೆದರಿಕೆ ಹಾಕಿದ್ದಕ್ಕಾಗಿ ನಿಂದನೆ ಆರೋಪಕ್ಕೆ ಉತ್ತರಿಸಲು ಆಗಸ್ಟ್ 31ರಂದು ನ್ಯಾಯಾಲಯದಲ್ಲಿ ಹಾಜರಾಗುವಂತೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗೆ ಇಸ್ಲಾಮಾಬಾದ್ ಹೈಕೋರ್ಟ್ ಸಮನ್ಸ್ ಜಾರಿಗೊಳಿಸಿದೆ. ಈ ಮಧ್ಯೆ, ಇಸ್ಲಾಮಾಬಾದ್ನಲ್ಲಿ ರ್ಯಾಲಿಗಳ ಮೇಲಿನ ನಿಷೇಧವನ್ನು ಉಲ್ಲಂಘಿಸಿದ ಆರೋಪದಲ್ಲಿ ಇಮ್ರಾನ್ ವಿರುದ್ಧ ಪೊಲೀಸರು ಮತ್ತೊಂದು ಪ್ರಕರಣ ದಾಖಲಿಸಿರುವುದಾಗಿ ವರದಿಯಾಗಿದೆ.
ಮತ್ತೊಂದು ಪ್ರಕರಣದಲ್ಲಿ ಇಮ್ರಾನ್ ಖಾನ್ ಅವರ ನಿಕಟವರ್ತಿ ಶಬಾಝ್ ಗಿಲ್ ಅವರು ಇಸ್ಲಮಾಬಾದ್ನಲ್ಲಿ ಹೊಂದಿರುವ ಅಪಾರ್ಟ್ಮೆಂಟ್ಗೆ ರಾತ್ರಿ ದಾಳಿ ನಡೆಸಿದ ಪೊಲೀಸರು ಅವರಿಗೆ ಕೈಕೋಳ ತೊಡಿಸಿ ವಿಚಾರಣೆಗೆ ಕರೆದೊಯ್ದಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ನಿರಂತರ ರ್ಯಾಲಿಗಳ ಮೂಲಕ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಇಮ್ರಾನ್ ಖಾನ್ ರನ್ನು ನಿಯಂತ್ರಿಸುವ ಒತ್ತಡ ಕ್ರಮವಾಗಿದೆ ಎಂದು ವಿಶ್ಲೇಷಿಸಲಾಗಿದೆ. ಆಗಸ್ಟ್ 31ರಂದು ವಿಚಾರಣೆಗೆ ಹಾಜರಾಗಲಿರುವ ಖಾನ್ ವಿರುದ್ಧದ ಅಪರಾಧ ನಿರ್ಣಯವು ಅವರನ್ನು ಜೀವನಪರ್ಯಂತ ರಾಜಕೀಯದಿಂದ ಅನರ್ಹಗೊಳಿಸುತ್ತದೆ. ಪಾಕಿಸ್ತಾನದ ಕಾನೂನಿನ ಅಡಿಯಲ್ಲಿ ಯಾವುದೇ ಅಪರಾಧಿಯು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ.
ಇಮ್ರಾನ್ ವಿರುದ್ಧ ದಾಖಲಾಗಿರುವ 2ನೇ ನಿಂದನೆ ಪ್ರಕರಣ ಇದಾಗಿದೆ. 1993ರ ಚುನಾವಣೆಯ ಬಳಿಕ ಅವರನ್ನು ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಿದ್ದ ಸುಪ್ರೀಂಕೋರ್ಟ್, ವಿಚಾರಣೆಯ ಬಳಿಕ ಅವರಿಗೆ ಕ್ಷಮಾದಾನ ನೀಡಿತ್ತು.





