ಥೈಲ್ಯಾಂಡ್ ಪ್ರಧಾನಿ ಅಧಿಕೃತ ಕರ್ತವ್ಯದಿಂದ ಅಮಾನತು
ಬ್ಯಾಂಕಾಕ್, ಆ.24: ಥೈಲ್ಯಾಂಡ್ ಪ್ರಧಾನಿ ಪ್ರಯುಥ್ ಚಾನ್ಒಚಾ ಅವರ ಅವಧಿಯ ಮಿತಿಯ ಕುರಿತಾದ ಕಾನೂನಿನ ಪರಿಶೀಲನೆ ಮುಕ್ತಾಯಗೊಳ್ಳುವ ತನಕ ಅವರನ್ನು ಅಲ್ಲಿನ ಸಾಂವಿಧಾನಿಕ ನ್ಯಾಯಾಲಯ ಅಧಿಕೃತ ಕರ್ತವ್ಯದಿಂದ ಅಮಾನತುಗೊಳಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
2014ರಲ್ಲಿ ಪ್ರಯೂಥ್ ನೇತೃತ್ವದಲ್ಲಿ ನಡೆದ ಕ್ಷಿಪ್ರಕ್ರಾಂತಿಯಲ್ಲಿ ದೇಶದ ಚುನಾಯಿತ ಸರಕಾರವನ್ನು ಪದಚ್ಯುತಗೊಳಿಸಿ ಬಳಿಕ ಪ್ರಯೂಥ್ ನೇತೃತ್ವದ ಸೇನಾಡಳಿತ ಅಧಿಕಾರಕ್ಕೆ ಬಂದಿತ್ತು. 2019ರಲ್ಲಿ ಸೇನಾಡಳಿತ ರೂಪಿಸಿದ ಸಂವಿಧಾನದ ಪ್ರಕಾರ ನಡೆದ ಚುನಾವಣೆಯಲ್ಲಿ ಗೆದ್ದ ಪ್ರಯೂಥ್ ನಾಗರಿಕ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.
ಥೈಲ್ಯಾಂಡ್ನ ಕಾನೂನಿನ ಪ್ರಕಾರ, ಓರ್ವ ವ್ಯಕ್ತಿ 8 ವರ್ಷದ ಅವಧಿಗೆ ಮಾತ್ರ ಪ್ರಧಾನಿಯಾಗಿ ಕರ್ತವ್ಯ ನಿರ್ವಹಿಸಬಹುದು. ಈ ಹಿನ್ನೆಲೆಯಲ್ಲಿ 2014ರಿಂದ ಪ್ರಧಾನಿಯಾಗಿರುವ ಪ್ರಯೂಥ್ ಅವರ ಅಧಿಕಾರಾವಧಿ ಈ ವರ್ಷ ಅಂತ್ಯವಾಗಬೇಕು ಎಂದು ಪ್ರಮುಖ ವಿಪಕ್ಷ ನ್ಯಾಯಾಲಯದ ಮೆಟ್ಟಿಲೇರಿದೆ. ಆದರೆ ತಾನು ಸೇನಾಡಳಿತದ ಮುಖ್ಯಸ್ಥರಾಗಿದ್ದ ಅವಧಿಯನ್ನು ಪರಿಗಣಿಸಬಾರದು ಎಂಬುದು ಪ್ರಯೂಥ್ ವಾದವಾಗಿದೆ. ಈ ಪ್ರಕರಣದಲ್ಲಿ ನ್ಯಾಯಾಲಯ ಶೀಘ್ರವೇ ತೀರ್ಪು ಘೋಷಿಸುವ ನಿರೀಕ್ಷೆಯಿದೆ.
ಉಪಪ್ರಧಾನಿ ಪ್ರವಿತ್ ವೊಂಗ್ಸುವಾನ್ ಹಂಗಾಮಿ ಪ್ರಧಾನಿಯಾಗುವ ನಿರೀಕ್ಷೆಯಿದೆ ಎಂದು ಸರಕಾರದ ಮೂಲಗಳು ಹೇಳಿವೆ.







