ರಶ್ಯದ ಆಕ್ರಮಣದ ಬಳಿಕ ಉಕ್ರೇನ್ ಪುನರ್ಜನ್ಮ ಪಡೆದಿದೆ, ಹಿಂಜರಿಯುವ ಪ್ರಶ್ನೆಯೇ ಇಲ್ಲ: ಝೆಲೆನ್ಸ್ಕಿ

ಸಾಂದರ್ಭಿಕ ಚಿತ್ರ:PTI
ಕೀವ್, ಆ.24: ರಶ್ಯದ ಆಕ್ರಮಣದ ಬಳಿಕ ತಮ್ಮ ದೇಶವು ಮರುಜನ್ಮ ಪಡೆದಿದೆ ಮತ್ತು ರಶ್ಯದ ಪ್ರಾಬಲ್ಯದಿಂದ ಸ್ವಾತಂತ್ರ್ಯ ಪಡೆಯಲು ನಡೆಸುತ್ತಿರುವ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ದೇಶದ 31ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ದೇಶವನ್ನುದ್ದೇಶಿಸಿ ಭಾವನಾತ್ಮಕವಾಗಿ ಮಾತನಾಡಿದ ಝೆಲೆನ್ಸ್ಕಿ, ಉಕ್ರೇನ್ಗೆ ಗೆಲುವು ಲಭಿಸುವ ದಿನದಂದು ಈ ಯುದ್ಧ ಅಂತ್ಯವಾಗಲಿದೆ ಎಂದರು.
ಫೆಬ್ರವರಿ 24ರ ಬೆಳಿಗ್ಗೆ 4 ಗಂಟೆಗೆ ಹೊಸ ರಾಷ್ಟ್ರವೊಂದು ಜಗತ್ತಿನಲ್ಲಿ ಉದಯಿಸಿದೆ, ಅದು ಹುಟ್ಟಿದ್ದಲ್ಲ, ಮರುಜನ್ಮ. ಅಳದ, ಕಿರುಚದ ಅಥವಾ ಭಯಪಡದ ರಾಷ್ಟ್ರ. ಅದು ಓಡಿಹೋಗಲಿಲ್ಲ, ಹಿಂಜರಿಯಲಿಲ್ಲ ಮತ್ತು ತನಗಾದ ಅವಮಾನವನ್ನು ಮರೆಯಲಿಲ್ಲ ಎಂದವರು ಹೇಳಿದ್ದಾರೆ. ಸೋವಿಯಟ್ ಒಕ್ಕೂಟದಿಂದ 1991ರಲ್ಲಿ ಸ್ವಾತಂತ್ರ್ಯ ಪಡೆದಿದ್ದ ನೆನಪಿಗಾಗಿ ಕೀವ್ನಲ್ಲಿ ಸ್ಥಾಪಿಸಿರುವ ಬೃಹತ್ ಸ್ಮಾರಕದ ಎದುರು ನಡೆದ ಅಧಿಕೃತ ಕಾರ್ಯಕ್ರಮದಲ್ಲಿ ಮಾತನಾಡಿದ ಝೆಲೆನ್ಸ್ಕಿ , ರಶ್ಯದೊಂದಿಗಿನ ಯುದ್ಧದಲ್ಲಿ ಯಾವುದೇ ರೀತಿಯ ರಾಜಿಯನ್ನು ವಿರೋಧಿಸುವ ಉಕ್ರೇನ್ನ ನಿಲುವನ್ನು ಪುನರುಚ್ಚರಿಸಿದರು.
ನಮ್ಮ ತಲೆಯನ್ನು ಗುರಿಯಾಗಿಸಿದ ಬಂದೂಕಿನ ಭಯದೊಂದಿಗೆ ನಾವು ಸಂಧಾನ ಮಾತುಕತೆಯ ಮೇಜಿನ ಎದುರು ಕುಳಿತುಕೊಳ್ಳುವುದಿಲ್ಲ. ನಮ್ಮ ಪಾಲಿಗೆ ಭಯಾನಕ ಅಸ್ತ್ರವೆಂದರೆ ಕ್ಷಿಪಣಿ, ಯುದ್ಧವಿಮಾನ ಅಥವಾ ಟ್ಯಾಂಕ್ಗಳಲ್ಲ, ಆದರೆ ಸಂಕೋಲೆಗಳು. 2014ರಲ್ಲಿ ರಶ್ಯ ಆಕ್ರಮಿಸಿಕೊಂಡಿರುವ ಕ್ರಿಮಿಯಾ ಪ್ರಾಂತ ಮತ್ತು ಪ್ರತ್ಯೇಕತಾವಾದಿಗಳ ವಶದಲ್ಲಿರುವ ಡೊನ್ಬಾಸ್ ಪ್ರಾಂತವನ್ನು ಉಕ್ರೇನ್ ಮರುಸ್ವಾಧೀನ ಪಡಿಸಿಕೊಳ್ಳಲಿದೆ. ಇದುವರೆಗೆ ಯುದ್ಧದ ಅಂತ್ಯ ಎಂದರೆ ಶಾಂತಿ ಎಂದು ನಾವು ಹೇಳುತ್ತಿದ್ದೆವು. ಆದರೆ ಈಗ ಗೆಲುವು ಯುದ್ಧದ ಅಂತ್ಯ ಎಂದು ಹೇಳುತ್ತೇವೆ. ನಮ್ಮ ಗೆಲುವಿನೊಂದಿಗೆ ಯುದ್ಧ ಅಂತ್ಯವಾಗಲಿದೆ ಎಂದರು. ಈ ಮಧ್ಯೆ, ಉಕ್ರೇನ್ನ ಸ್ವಾತಂತ್ರ್ಯ ದಿನಾಚರಣೆಯಂದು ರಶ್ಯದ ದಾಳಿ ತೀವ್ರಗೊಳ್ಳುವ ಸಾಧ್ಯತೆಯಿರುವುದರಿಂದ ವಾಯುದಾಳಿಯ ಸೈರನ್ ಮೊಳಗಿದರೆ ಅದನ್ನು ಗಂಭೀರವಾಗಿ ಪರಿಗಣಿಸುವಂತೆ ಉಕ್ರೇನ್ ಸೇನೆ ನಾಗರಿಕರನ್ನು ಎಚ್ಚರಿಸಿದೆ.
ಉದ್ದೇಶಪೂರ್ವಕ: ರಶ್ಯ
ಉಕ್ರೇನ್ನಲ್ಲಿ ನಡೆಸುತ್ತಿರುವ ‘ವಿಶೇಷ ಸೇನಾ ಕಾರ್ಯಾಚರಣೆ’ ಉದ್ದೇಶಪೂರ್ವಕವಾಗಿ ನಿಧಾನಗತಿಯಲ್ಲಿ ಮುಂದುವರಿಯುತ್ತಿದೆ ಎಂದು ರಶ್ಯದ ರಕ್ಷಣಾ ಸಚಿವ ಸೆರ್ಗೆಯ್ ಶೊಯಿಗು ಹೇಳಿದ್ದಾರೆ. ಉಜ್ಬೇಕಿಸ್ತಾನದಲ್ಲಿ ರಕ್ಷಣಾ ಸಚಿವರ ಸಭೆಯಲ್ಲಿ ಮಾತನಾಡಿದ ಅವರು, ಕ್ಷಿಪ್ರಗತಿಯಲ್ಲಿ ಕಾರ್ಯಾಚರಣೆ ಅಂತ್ಯಗೊಳಿಸಲು ನಮಗೆ ಕಷ್ಟವೇನಲ್ಲ. ಆದರೆ ನಾಗರಿಕರ ಸಾವು ನೋವುಗಳನ್ನು ತಪ್ಪಿಸುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿರುವುದಾಗಿ ವರದಿಯಾಗಿದೆ.







