ಅತ್ಯಾಧುನಿಕ ಪರಮಾಣು ರಿಯಾಕ್ಟರ್ ಸ್ಥಾಪನೆಗೆ ಜಪಾನ್ ಯೋಜನೆ
ಟೋಕಿಯೊ, ಆ.24: ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಇಂಧನ ಆಮದು ವೆಚ್ಚ ತೀವ್ರಗತಿಯಲ್ಲಿ ಹೆಚ್ಚುತ್ತಿರುವುದರಿಂದ ದೇಶದ ಪರಮಾಣು ಶಕ್ತಿ ಉದ್ಯಮವನ್ನು ಪುನರುಜ್ಜೀವನಗೊಳಿಸುವ ಅಗತ್ಯವಿದೆ ಎಂದು ಜಪಾನ್ ಪ್ರಧಾನಿ ಫುಮಿಯೊ ಕಿಶಿಡ ಬುಧವಾರ ಹೇಳಿದ್ದಾರೆ.
2011ರ ಫುಕುಷಿಮಾ ದುರಂತದ ಬಳಿಕ ಸುರಕ್ಷತಾ ಕ್ರಮವಾಗಿ ಹಲವು ಪರಮಾಣು ರಿಯಾಕ್ಟರ್ಗಳನ್ನು ಮುಚ್ಚಲಾಗಿರುವುದರಿಂದ ಜಪಾನ್ನ ಹೊಸ ಯೋಜನೆ ವಿವಾದ ಹುಟ್ಟುಹಾಕುವ ಸಾಧ್ಯತೆಯಿದೆ. ಆದರೆ ಉಕ್ರೇನ್ ಮೇಲಿನ ರಶ್ಯದ ಆಕ್ರಮಣದ ಬಳಿಕ ಇಂಧನದ ಪೂರೈಕೆ ಮೊಟಕುಗೊಂಡಿರುವುದರಿಂದ ಇಂತಹ ಕ್ರಮ ಅನಿವಾರ್ಯ ಎಂದು ಜಪಾನ್ ಪ್ರತಿಪಾದಿಸುತ್ತಿದೆ.
ಉಕ್ರೇನ್ ಮೇಲಿನ ರಶ್ಯದ ಆಕ್ರಮಣವು ವಿಶ್ವದ ಇಂಧನ ಶಕ್ತಿಯ ಭೂದೃಶ್ಯವನ್ನು ವ್ಯಾಪಕವಾಗಿ ಪರಿವರ್ತಿಸಿದೆ . ಆದ್ದರಿಂದ ಜಪಾನ್ ಸಂಭಾವ್ಯ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು. ಅತ್ಯಾಧುನಿಕ, ಮುಂದಿನ ತಲೆಮಾರಿನ ಪರಮಾಣು ರಿಯಾಕ್ಟರ್ಗಳನ್ನು ನಿರ್ಮಿಸುವ ಬಗ್ಗೆ ಜಪಾನ್ ಪರಿಶೀಲಿಸಬೇಕು ಎಂದ ಅವರು, ಸುರಕ್ಷತೆಯನ್ನು ಖಾತರಿಪಡಿಸುವುದಾದರೆ ರಿಯಾಕ್ಟರ್ಗಳ ಸೇವಾ ಜೀವನವನ್ನು ವಿಸ್ತರಿಸುವ ಬಗ್ಗೆ ಚರ್ಚೆಗೆ ಸರಕಾರ ಸಿದ್ಧವಿದೆ ಎಂದರು.
2011ರ ಮಾರ್ಚ್ನಲ್ಲಿ ಸುನಾಮಿಯಿಂದಾಗಿ ಜಪಾನ್ನ ಫುಕುಶಿಮಾ ಪರಮಾಣು ಸ್ಥಾವರದಲ್ಲಿ ದುರಂತ ಸಂಭವಿಸಿತ್ತು. ಆ ಬಳಿಕ ದೇಶದ 33 ಪರಮಾಣು ರಿಯಾಕ್ಟರ್ಗಳ ಪೈಕಿ 23ರ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಅದುವರೆಗೆ ಜಪಾನ್ನ ವಿದ್ಯುತ್ ಉತ್ಪಾದನೆಯ 33% ಪರಮಾಣು ಸ್ಥಾವರಗಳಿಂದ ಲಭ್ಯವಾಗುತ್ತಿತ್ತು, 2011ರ ಬಳಿಕ ಈ ಪ್ರಮಾಣ 5%ಕ್ಕೂ ಕಡಿಮೆಯಾಗಿದೆ.
ಇದೀಗ ವಿದ್ಯುತ್ ಉತ್ಪಾದನೆಗೆ ಆಮದು ಮಾಡಿದ ಪಳೆಯುಳಿಕೆ ಇಂಧನದ ಅವಲಂಬನೆ ಹೆಚ್ಚಿದೆ. ಜಪಾನ್ನ ಎಲ್ಎನ್ಜಿ(ದ್ರವೀಕೃತ ನೈಸರ್ಗಿಕ ಅನಿಲ) ಬೇಡಿಕೆಯ ಸುಮಾರು 8%ದಷ್ಟನ್ನು ರಶ್ಯ ಪೂರೈಸುತ್ತಿತ್ತು. ಆದರೆ ಈಗ ರಶ್ಯದ ಮೇಲೆ ಜಪಾನ್ ನಿರ್ಬಂಧ ವಿಧಿಸಿರುವುದರಿಂದ ಈ ಪೂರೈಕೆ ಮೊಟಕುಗೊಂಡಿದೆ ಎಂದು ಸರಕಾರದ ಮೂಲಗಳು ಹೇಳಿವೆ. ಕೋವಿಡ್ ಸೋಂಕಿಗೆ ಒಳಗಾಗಿರುವ ಪ್ರಧಾನಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಸಭೆಯಲ್ಲಿ ಪಾಲ್ಗೊಂಡರು ಎಂದು ಮಾಧ್ಯಮಗಳು ವರದಿ ಮಾಡಿವೆ.







