ಸೆಪ್ಟೆಂಬರ್ 3: ಶಿವಮೊಗ್ಗದಲ್ಲಿ ವಿವಿಧ ಸಂಘಟನೆಗಳಿಂದ 'ನಮ್ಮ ನಡಿಗೆ ಶಾಂತಿಯ ಕಡೆಗೆ' ಕಾರ್ಯಕ್ರಮ

ಶಿವಮೊಗ್ಗ(ಆ.24): ನಗರದಲ್ಲಿ ಇತ್ತೀಚೆಗಿನ ಅಹಿತಕರ ಘಟನೆಗಳಿಂದ ಸುಸಂಸ್ಕೃತರ ತವರೂರು ಎನಿಸಿಕೊಂಡಿದ್ದ ಜಿಲ್ಲೆಯೀಗ ತಲ್ಲಣಗೊಂಡಿದೆ. ಶಿವಮೊಗ್ಗದ ಘನತೆ ಕುಂದಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಜಾತಿ ಧರ್ಮ, ಭೇದವಿಲ್ಲದೇ ವಿವಿಧ ಸಂಘ, ಸಂಸ್ಥೆಗಳ ಮುಖಂಡರು, ಧರ್ಮಗುರುಗಳ ನೇತೃತ್ವದಲ್ಲಿ ಸೆಪ್ಟೆಂಬರ್ 3ರಂದು ನಗರದಲ್ಲಿ ನಮ್ಮ ನಡಿಗೆ ಶಾಂತಿಯ ಕಡೆಗೆ ಘೋಷವಾಕ್ಯದಡಿ ಬೃಹತ್ ಶಾಂತಿ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳುವ ಕುರಿತು ಸರಕಾರಿ ನೌಕರರ ಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಣಯಿಸಲಾಯಿತು.
ಸಭೆಯಲ್ಲಿ ಸರ್ಜಿ ಪೌಂಡೇಷನ್, ರಾಜ್ಯ ರೈತ ಸಂಘ, ರೌಂಡ್‌ಟೇಬಲ್ ಇಂಡಿಯಾ ಘಟಕ, ದಲಿತ ಸಂಘರ್ಷ ಸಮಿತಿ, ಕ್ರೈಸ್ತ ಮುಸ್ಲಿಂ ಧರ್ಮದ ಮುಖಂಡರು, ವರ್ತಕರು, ಉದ್ಯಮಿಗಳು, ಪರಿಸರ ಪ್ರೇಮಿಗಳು, ಪ್ರಗತಿಪರ ಚಿಂತಕರು, ಶಿಕ್ಷಣ ಸಂಸ್ಥೆಗಳ ಮುಖಂಡರು ಭಾಗವಹಿಸಿ ಅನಿಸಿಕೆ ಹಂಚಿಕೊಂಡು ಸಹಕಾರ ನೀಡುವುದಾಗಿ ಭರವಸೆ ಕೊಟ್ಟರು.
ಶಿವಮೊಗ್ಗದ ಕುರಿತು ಟಿವಿ ಗಳಲ್ಲಿ ಬಿತ್ತರವಾಗುವ ಭಯ ಬೀಳಿಸುವ ಸುದ್ದಿಗಳು, ಬೇಡವಾದ ವಿಚಾರಗಳಿಗೆ ಮಹತ್ವ ಕೊಡುತ್ತಿರುವ ನಾಯಕರು ಮತ್ತು ನಾಗರಿಕರು, ಕೆಲವರ ಪುಂಡಾಟಗಳಿಗೆ ಇಡೀ ಊರು ನರಳುತ್ತಾ ಹೋಗುತ್ತಿರುವ ವಿಚಾರಗಳಿಗೆ ಎಲ್ಲರೂ ಬೇಸರ ವ್ಯಕ್ತಪಡಿಸಿದರು ಮತ್ತು ಬಂಡವಾಳ ಹೂಡಿಕೆಗೆ ಶಿವಮೊಗ್ಗವನ್ನು ಈ ಕಾರಣಗಳಿಂದ ಬಿಡುತ್ತಿರುವುದರ ಕುರಿತು ಕಳವಳ ವ್ಯಕ್ತಪಡಿಸಿದರು. ಪ್ರವಾಸಕ್ಕೆ ನಮ್ಮಲ್ಲಿಗೆ ಬರುವ ಜನ ನಿಮ್ಮೂರಲ್ಲಿ ಕರ್ಪ್ಯೂ ಇದೆಯಾ, ಸೆಕ್ಷನ್ ಇದೆಯಾ ಎಂದು ಕೇಳಿಕೊಂಡು ಬರುವಂತಾಗಿದೆ. ಇದಕ್ಕೆ ಪರಿಹಾರವಾಗಿ ಶಾಂತಿ ನಡಿಗೆ ಹಮ್ಮಿಕೊಂಡು, ಸಮಾಜಕ್ಕೆ ಸ್ಪಷ್ಟವಾದ ಸಂದೇಶವನ್ನು ರವಾನಿಸಬೇಕಿದೆ ಎಂದು ಹೇಳಿದರು.
ರಾಜ್ಯ ರೈತ ಸಂಘದ ಅಧ್ಯಕ್ಷರಾದ ಹೆಚ್.ಆರ್.ಬಸವರಾಜಪ್ಪ ಮಾತನಾಡಿ, ಇದು ಸೂಕ್ಷ್ಮ ಜಿಲ್ಲೆಯಾಗಿಬಿಟ್ಟಿದೆ . ಆದರೆ, ಸೂಕ್ಷ್ಮ ಮನಸ್ಥಿತಿ ಹೊಂದುವ ಮೂಲಕ ಶಾಂತಿ, ತಾಳ್ಮೆಯಿಂದ ವರ್ತಿಸಬೇಕು. ಇರುವ ಜನಸಂಖ್ಯೆಯಲ್ಲಿ ಶೇ.95 ರಷ್ಟು ಮಂದಿ ಶಾಂತಿ ಪ್ರಿಯರೇ. ಶಾಂತಿಯೇ ನಮ್ಮ ಉದ್ದೇಶ. ಈ ಶಾಂತಿ ನಡಿಗೆಯಲ್ಲಿ ಯಾವುದೇ ರಾಜಕಾರಣದ ಪ್ರವೇಶ ಬೇಡ. ಸರ್ವಧರ್ಮದವರನ್ನು ಒಂದುಗೂಡಿಸಿಕೊಂಡು ಶಾಶ್ವತ ಶಾಂತಿಗಾಗಿ ಮಾದರಿಯಾಗೋಣ ಎಂದರು.
ಸರ್ಜಿ ಆಸ್ಪತ್ರೆಗಳ ಸಮೂಹದ ಮ್ಯಾನೇಜಿಂಗ್ ಡೈರೆಕ್ಟರ್ ಡಾ.ಧನಂಜಯ ಸರ್ಜಿ ಅವರು ಮಾತನಾಡಿ, ಜಿಲ್ಲೆ ಸಂಪನ್ಮೂಲಗಳಿಂದ ಸಂಪದ್ಭರಿತವಾಗಿದೆ. ಬೆಳವಣಿಗೆ ಹೊಂದುತ್ತಿದೆ. ಆದರೆ, ಜಿಲ್ಲೆಯಲ್ಲಿ ನಡೆದ ಘಟನೆಗಳಿಂದ ಸುಮಾರು 200 ಕೋಟಿ ರೂ, ನಷ್ಟ ಉಂಟಾಗಿದೆ. ಇದು ವರ್ತಕರು, ಉದ್ಯಮಿಗಳು, ಕೂಲಿ, ಕಾರ್ಮಿಕರ ಮೇಲೆ ದುಷ್ಪರಿಣಾಮ ಬೀರಿದೆ. ಇಂತಹ ಸಣ್ಣ ಪುಟ್ಟ ಗಲಾಟೆಗಳೇ ಮುಂದೆ ದೊಡ್ಡ ಅನಾಹುತಗಳಿಗೆ ಎಡೆಮಾಡಿಕೊಡುತ್ತವೆ. ಉತ್ತಮ ಭವಿಷ್ಯದ ನಾಳೆಗಾಗಿ ಶಾಂತಿ ನಡಿಗೆ ಹಮ್ಮಿಕೊಳ್ಳಲಾಗುತ್ತಿದೆ. ಅಂದು 5 ಸಾವಿರ ಜನ ಸೇರುವ ನಿರೀಕ್ಷೆ ಇದೆ. ನಗರದ ಪ್ರಮುಖ ಮಾರ್ಗಗಳಲ್ಲಿ ಶಾಂತಿ ನಡಿಗೆ ಸಾಗಲಿದೆ. ಹಲವು ಸಂಘ,ಸಂಸ್ಥೆಗಳ ಹಾಗೂ ಸರ್ವಧರ್ಮಗಳ ಮುಖಂಡರ ನೇತೃತ್ವದಲ್ಲಿ ಶಾಂತಿ ನಡಿಗೆ ನಡೆಯಲಿದೆ. ಈ ಶಾಂತಿ ಸಂದೇಶ ರಾಜ್ಯದಿಂದ ದೆಹಲಿವರೆಗೆ ತಲುಪಬೇಕು. ಶಾಂತಿ ನೆಲೆಸುವ ನಿಟ್ಟಿನಲ್ಲಿ ಗೃಹ ಸಚಿವರ ಮೇಲೆ ಒತ್ತಡ ಹಾಕಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭ ವಕೀಲರಾದ ಕೆ.ಪಿ ಶ್ರೀಪಾಲ್ ಮಾತನಾಡಿ, ಇತ್ತೀಚೆಗಿನ ಕೋಮು ಗಲಭೆಗಳು ಜಿಲ್ಲೆಯ ಬೆಳವಣಿಗೆ ದೃಷ್ಟಿಯಿಂದ ಶೋಭೆ ತರುವುದಿಲ್ಲ. ಘಟನೆಯ ಹಿಂದಿನ ಶಕ್ತಿಗಳಿಗೆ ಕಡಿವಾಣ ಹಾಕಬೇಕಿದೆ. ಮುಂದೆ ಇಂತಹ ಅಶಾಂತಿ ಸೃಷ್ಟಿಸುವಂತಹ ಪ್ರಕರಣಗಳು ನಡೆಯಬಾರದು. ವಿಶ್ವಮಾನವ ಸಂದೇಶವನ್ನು ಕುವೆಂಪು ಅವರ ವಾಣಿಯು ಸಾಕಾರಗೊಳ್ಳಬೇಕು. ಈ ನಿಟ್ಟಿನಲ್ಲಿ ಶಾಂತಿ ಸಂದೇಶ ಗಟ್ಟಿ ಧ್ವನಿ ಮೊಳಗಿಸಬೇಕಿದ್ದು, ಇದಕ್ಕೆ ಎಲ್ಲರ ಸಹಕಾರ ಕೇಳಿದರು.
ಈ ಸಂದರ್ಭ ವಾಸವಿ ಶಿಕ್ಷಣ ಸಂಸ್ಥೆಯ ಶೇಷಾಚಲ, ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ಗುರುಮೂರ್ತಿ, ಓಪನ್ ಮೈಂಡ್ಸ್ ವರ್ಲ್ಡ್ ಸ್ಕೂಲ್ ನ ಕಿರಣ್ ಕುಮಾರ್, ಕ್ರಾಂತಿದೀಪ ಪತ್ರಿಕೆಯ ಸಂಪಾದಕರಾದ ಎನ್.ಮಂಜುನಾಥ್, ಪತ್ರಕರ್ತರಾದ ಆರ್.ಎಸ್.ಹಾಲಸ್ವಾಮಿ, ಟೆಲೆಕ್ಸ್ ರವಿ, ಡಾ.ಭರತ್, ಜೆಸಿಐ ಮಲ್ನಾಡ್‌ನ ಪ್ರದೀಪ್, ಜಿ.ಡಿ.ಮಂಜುನಾಥ್, ಜವಳಿ ವರ್ತಕರಾದ ಟಿ.ಆರ್.ಅಶ್ವತ್ಥನಾರಾಣ ಶೆಟ್ಟಿ, ವೆಂಕಟೇಶ ಮೂರ್ತಿ, ಶಶಿಕಾಂತ್, ಮುಸ್ಲಿಂ ಸಮಾಜದ ಮುಖಂಡರಾದ ಅಪ್ತಾಬ್ ಪರ್ವೇಜ್ ಹಾಗೂ ಕೈಸ್ತ ಧರ್ಮದ ಪಾದ್ರಿಗಳಾದ ಫಾದರ್ ವೀರೇಶ್ ಮೊರಾಸ್ ಸೇರಿದಂತೆ ಐವತ್ತಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.







