2025ರ ಒಳಗೆ ದಿಲ್ಲಿಯ ನಗರಗಳಲ್ಲಿ ಶೇ. 80 ಎಲೆಕ್ಟ್ರಿಕ್ ಬಸ್‌ಗಳು: ಕೇಜ್ರಿವಾಲ್

ಹೊಸದಿಲ್ಲಿ, ಆ. 24: ನಗರಗಳ ಎಲ್ಲ ಸಾರಿಗೆ ಬಸ್‌ಗಳಲ್ಲಿ ಸುಮಾರು ಶೇ. 80ರಷ್ಟು 2025ರ ಒಳಗೆ ಸಂಪೂರ್ಣವಾಗಿ ಎಲೆಕ್ಟ್ರಿಕ್ ಬಸ್‌ಗಳಾಗಲಿವೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಬುಧವಾರ ಹೇಳಿದ್ದಾರೆ.
ಇಲ್ಲಿನ ರಾಜ್‌ಘಾಟ್ ಬಸ್ ಡಿಪೊದಲ್ಲಿ 97 ಇಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೆ ಅವರು ಚಾಲನೆ ನೀಡಿದರು. ಇದರೊಂದಿಗೆ ಇಲೆಕ್ಟ್ರಿಕ್ ಬಸ್‌ಗಳ ಸಂಖ್ಯೆ 250ಕ್ಕೆ ಏರಿಕೆಯಾಗಿದೆ.
‘‘ಈಗಾಗಲೇ 1,500 ಬಸ್‌ಗಳಿಗೆ ಆದೇಶ ನೀಡಲಾಗಿದೆ. ಅವುಗಳನ್ನು ನವೆಂಬರ್-ಡಿಸೆಂಬರ್ ಒಳಗೆ ಸೇವೆಗೆ ನಿಯೋಜಿಸಲಾಗುವುದು. ದಿಲ್ಲಿಯಲ್ಲಿ ಪ್ರಸ್ತುತ 153 ಇಲೆಕ್ಟ್ರಿಕ್ ಬಸ್‌ಗಳು ಸಂಚರಿಸುತ್ತಿವೆ. ಇದರೊಂದಿಗೆ ಇಂದು 97 ಇಲೆಕ್ಟ್ರಿಕ್ ಬಸ್‌ಗಳು ಸೇರಿವೆ. ಇದರಿಂದ ಒಟ್ಟು ಇಲೆಕ್ಟ್ರಿಕ್ ಬಸ್‌ಗಳ ಸಂಖ್ಯೆ 250 ಆಗಿವೆ. 50ಕ್ಕಿಂತ ಅಧಿಕ ಬಸ್‌ಗಳನ್ನು ಸೆಪ್ಟಂಬರ್‌ನಲ್ಲಿ ಸೇವೆಗೆ ನಿಯೋಜಿಸಲಾಗಿತ್ತು. 2023 ನವೆಂಬರ್ ಒಳಗೆ ದಿಲ್ಲಿಯ ರಸ್ತೆಯಲ್ಲಿ ಇಂತಹ ಸುಮಾರು 1,800 ಬಸ್‌ಗಳು ಸಂಚರಿಸಲಿವೆ’’ ಎಂದು ಅವರು ಹೇಳಿದ್ದಾರೆ.
‘‘10,380 ಬಸ್‌ಗಳಲ್ಲಿ ಶೇ. 80 ಬಸ್‌ಗಳು 2025ರ ಒಳಗೆ ಇಲೆಕ್ಟ್ರಿಕ್ ಬಸ್‌ಗಳಾಗಲಿವೆ. 2023ರ ಒಳಗೆ 55 ಡಿಪೋಗಳಲ್ಲಿ ಚಾರ್ಜಿಂಗ್ ಸೌಲಭ್ಯವನ್ನು ಕಲ್ಪಿಸಲು ಯೋಜಿಸಲಾಗಿದೆ. ಶಿಕ್ಷಣ ಹಾಗೂ ಆರೋಗ್ಯದ ವಿಷಯದಲ್ಲಿ ದಿಲ್ಲಿಯನ್ನು ವಿಶ್ವಕ್ಕೆ ಮಾದರಿಯನ್ನಾಗಿ ಮಾಡಿದಂತೆ, ಮಾದರಿ ಸಾರಿಗೆಗೆ ದಿಲ್ಲಿಯನ್ನು ವಿಶ್ವದಲ್ಲಿ ಮಾದರಿಯನ್ನಾಗಿ ಮಾಡಲಾಗುವುದು’’ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.





