ರಶ್ಯ: ಉಕ್ರೇನ್ ಮೇಲಿನ ಆಕ್ರಮಣವನ್ನು ಟೀಕಿಸಿದ್ದ ವಿಪಕ್ಷ ಮುಖಂಡನ ಬಂಧನ

ಮಾಸ್ಕೋ, ಆ.೨೪: ಉಕ್ರೇನ್ ಮೇಲಿನ ರಶ್ಯದ ಆಕ್ರಮಣವನ್ನು ಟೀಕಿಸಿದ್ದ ವಿಪಕ್ಷ ಮುಖಂಡ ಯೆವ್ಜಿನಿ ರೊಯಿಝ್ಮನ್ನನ್ನು ಯೆಕಟೆರಿನ್ಬರ್ಗ್ನಲ್ಲಿ ಬಂಧಿಸಲಾಗಿದ್ದು ವಿಚಾರಣೆಗಾಗಿ ಮಾಸ್ಕೋಗೆ ಕರೆದೊಯ್ಯಲಾಗಿದೆ ಎಂದು ರಶ್ಯದ ಪೊಲೀಸರು ಬುಧವಾರ ಹೇಳಿದ್ದಾರೆ.
ಯೆಕಟೆರಿನ್ಬರ್ಗ್ನ ಉರಾಲ್ಸ್ ನಗರದ ಮಾಜಿ ಮೇಯರ್ ಆಗಿರುವ ರೊಯಿಝ್ಮನ್, ಉಕ್ರೇನ್ನಲ್ಲಿನ ರಶ್ಯದ ಕಾರ್ಯಾಚರಣೆಯ ಕುರಿತು ಟೀಕೆ ಮಾಡುವ ಮೂಲಕ ರಶ್ಯದ ಸೇನೆಗೆ ಕಳಂಕ ತಂದ ಕಾರಣಕ್ಕೆ ಅವರನ್ನು ಬಂಧಿಸಲಾಗಿದೆ. ರಶ್ಯ ಸೇನೆಗೆ ಅಪಖ್ಯಾತಿ ತಂದ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ ಮತ್ತು ಮಾಸ್ಕೋದಲ್ಲಿ ಹೆಚ್ಚಿನ ವಿಚಾರಣೆಗೆ ಒಳಗಾಗಲಿದ್ದಾರೆ ಎಂದು ರಶ್ಯದ ಆಂತರಿಕ ಸಚಿವಾಲಯದ ಹೇಳಿಕೆ ತಿಳಿಸಿದೆ. ಆರೋಪ ಸಾಬೀತಾದರೆ ಅವರು ೧೦ ವರ್ಷದವರೆಗೆ ಜೈಲುಶಿಕ್ಷೆಗೆ ಗುರಿಯಾಗಲಿದ್ದಾರೆ.
ರೊಯಿಝ್ಮನ್ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಪೋಸ್ಟ್ ಮಾಡಿರುವ ವೀಡಿಯೊದಲ್ಲಿ ಉಕ್ರೇನ್ನಲ್ಲಿ ರಶ್ಯ ಸೇನೆ ನಡೆಸಿದ ವಿಶೇಷ ಕಾರ್ಯಾಚರಣೆಯನ್ನು ಆಕ್ರಮಣ ಎಂದು ವಿಶ್ಲೇಷಿಸುವ ಮೂಲಕ ಈ ಅಪರಾಧ ಎಸಗಿದ್ದಾರೆ ಎಂದು ರಶ್ಯದ ತಾಸ್ ಸುದ್ಧಿಸಂಸ್ಥೆ ವರದಿ ಮಾಡಿದೆ. ಉಕ್ರೇನ್ ಮೇಲಿನ ಆಕ್ರಮಣವನ್ನು ಟೀಕಿಸಿದ್ದಕ್ಕೆ ಇದಕ್ಕೂ ಮುನ್ನ ರೊಯಿಝ್ಮನ್ಗೆ ೩ ಬಾರಿ ದಂಡ ವಿಧಿಸಲಾಗಿತ್ತು.





