ಪ್ರಧಾನಿ ಮೋದಿಗೆ ಭದ್ರತಾ ಲೋಪ: ಫಿರೋಝ್ ಪುರ ಹಿರಿಯ ಪೊಲೀಸ್ ಅಧೀಕ್ಷಕರು ಕಾನೂನು,ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲ
ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯ ಅಭಿಪ್ರಾಯ

ಪಂಜಾಬ್ನ ಫಿರೋಜ್ಪುರದ ಫ್ಲೈಓವರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಾವಲು ಪಡೆ ಸಿಲುಕಿಕೊಂಡಿದ್ದ ಸಂದರ್ಭ. Photo:PTI
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಾವಲು ಪಡೆ (Prime Minister Narendra Modi’s convoy)ಜನವರಿಯಲ್ಲಿ 15 ನಿಮಿಷಗಳ ಕಾಲ ಫಿರೋಝ್ಪುರ ಜಿಲ್ಲೆಯ ಫ್ಲೈಓವರ್ನಲ್ಲಿ ಸಿಲುಕಿಕೊಂಡಾಗ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ, ತಮ್ಮ ಕರ್ತವ್ಯವನ್ನು ನಿರ್ವಹಿಸುವಲ್ಲಿ ಫಿರೋಝ್ಪುರದ ಹಿರಿಯ ಪೊಲೀಸ್ ಅಧೀಕ್ಷಕರು ವಿಫಲರಾಗಿದ್ದಾರೆ ಎಂದು ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿ(SC-appointed panel)ಗುರುವಾರ ಅಭಿಪ್ರಾಯಪಟ್ಟಿದೆ ಎಂದು Live Law ವರದಿ ಮಾಡಿದೆ.
"ಸಾಕಷ್ಟು ಬಲ ಲಭ್ಯವಿದ್ದರೂ ಹಾಗೂ ಪ್ರಧಾನಿ ಮೋದಿ ಅವರು ಆ ಮಾರ್ಗವನ್ನು ಪ್ರವೇಶಿಸುತ್ತಾರೆ ಎಂದು 2 ಗಂಟೆಗಳ ಮೊದಲು ಅವರಿಗೆ ತಿಳಿಸಲಾಗಿದ್ದರೂ ಕೂಡ ಅವರು ತಮ್ಮ ಕರ್ತವ್ಯ ನಿರ್ವಹಿಸಲು ವಿಫಲರಾಗಿದ್ದಾರೆ" ಎಂದು ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯ ವರದಿಯನ್ನು ಉಲ್ಲೇಖಿಸಿ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಹೇಳಿದರು. ಸಮಿತಿಯ ನೇತೃತ್ವವನ್ನು ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ವಹಿಸಿದ್ದರು.
ಜನವರಿ 5 ರಂದು ಪಂಜಾಬ್ನ ಹುಸೇನಿವಾಲಾ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದ್ದರಿಂದ ಪ್ರಧಾನಿ ಅವರ ಬೆಂಗಾವಲು ಪಡೆ ಫ್ಲೈಓವರ್ನಲ್ಲಿಯೇ ಸಿಲುಕಿಕೊಂಡಿತ್ತು. ಆ ನಂತರ ಮೋದಿ ಅವರು ಫಿರೋಝ್ ಪುರಕ್ಕೆ ಭೇಟಿ ನೀಡುವುದನ್ನು ಸ್ಥಗಿತಗೊಳಿಸಿದ್ದರು. ಈ ಘಟನೆಯ ಭಾರೀ ವಿವಾದಕ್ಕೆ ಕಾರಣವಾಗಿತ್ತು.
ಆಗ ಕೇಂದ್ರವು ಇದನ್ನು "ಪ್ರಮುಖ ಭದ್ರತಾ ಲೋಪ" ಎಂದು ಬಣ್ಣಿಸಿತ್ತು. ಆದರೆ, ಆ ಸಮಯದಲ್ಲಿ ಪಂಜಾಬ್ ಮುಖ್ಯಮಂತ್ರಿಯಾಗಿದ್ದ ಚರಣ್ಜಿತ್ ಸಿಂಗ್ ಚನ್ನಿ ಈ ಹೇಳಿಕೆಯನ್ನು ತಳ್ಳಿಹಾಕಿದ್ದರು ಹಾಗೂ ಪ್ರಧಾನಿಯ ಭದ್ರತೆಗೆ ಯಾವುದೇ ಬೆದರಿಕೆ ಇಲ್ಲ ಎಂದು ಹೇಳಿದ್ದರು. ಆದರೂ ನಡೆದ ಘಟನೆಗೆ ಚನ್ನಿ ವಿಷಾದ ವ್ಯಕ್ತಪಡಿಸಿದ್ದರು.







