ಬಿಜೆಪಿ ನಮ್ಮ 40 ಶಾಸಕರನ್ನು ತನ್ನತ್ತ ಸೆಳೆಯಲು ಪ್ರಯತ್ನಿಸಿದೆ: ಆಮ್ ಆದ್ಮಿ ಪಕ್ಷ ಆರೋಪ

AAP leader Dilip Pandey, Photo:twitter
ಹೊಸದಿಲ್ಲಿ: ತನ್ನ ಶಾಸಕರನ್ನು ಸೆಳೆಯಲು ಹಾಗೂ ತನ್ನ ಸರಕಾರವನ್ನು ಉರುಳಿಸಲು ಬಿಜೆಪಿ ಮಾಡುತ್ತಿರುವ ಪ್ರಯತ್ನಗಳ ಕುರಿತು ಚರ್ಚಿಸಲು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಗುರುವಾರ ಕರೆದಿದ್ದ ಸಭೆಗೆ 50 ಕ್ಕೂ ಹೆಚ್ಚು ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕರು ಆಗಮಿಸಿದ್ದಾರೆ. ಕೆಲವು ಶಾಸಕರು "ಸಂಪರ್ಕಕ್ಕೆ ಸಿಕ್ಕಿಲ್ಲ" ಎಂದು ಹೇಳಲಾಗಿದೆ.
ಮುಖ್ಯಮಂತ್ರಿಗಳ ಸಭೆಯಲ್ಲಿ 53 ಶಾಸಕರು ಭಾಗವಹಿಸಿದ್ದರು.
"ಬಿಜೆಪಿ ನಮ್ಮಿಂದ 40 ಶಾಸಕರನ್ನು ಬೇರ್ಪಡಿಸಲು ತಯಾರಿ ನಡೆಸುತ್ತಿದೆ. ಎಲ್ಲಾ ಶಾಸಕರನ್ನು ಸಂಪರ್ಕಿಸಲಾಗುತ್ತಿದೆ. ನಿನ್ನೆ ಸಂದೇಶವನ್ನು ತಿಳಿಸಲಾಗಿದೆ ಹಾಗೂ ಸಂಪರ್ಕವನ್ನು ಸ್ಥಾಪಿಸಲು ಸಾಧ್ಯವಾಗದ ಶಾಸಕರನ್ನು ಮತ್ತೊಮ್ಮೆ ಸಂಪರ್ಕಿಸಲಾಗುವುದು" ಎಂದು ಎಎಪಿ ನಾಯಕ ದಿಲೀಪ್ ಪಾಂಡೆ(AAP leader Dilip Pandey ) ಹೇಳಿದರು.
ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ಕರ್ನಾಟಕದ ಮಾದರಿಯನ್ನು ಅನುಸರಿಸಿ ಬಿಜೆಪಿ ತನ್ನ ಸರಕಾರವನ್ನು ಉರುಳಿಸಲು ಆಪರೇಷನ್ ಕಮಲದ ಸಂಚು ರೂಪಿಸುತ್ತಿದೆ ಎಂದು ಎಎಪಿ ಆರೋಪಿಸಿದೆ.
70 ಸದಸ್ಯ ಬಲದ ದಿಲ್ಲಿ ವಿಧಾನಸಭೆಯಲ್ಲಿ ಎಎಪಿ 62 ಶಾಸಕರನ್ನು ಹೊಂದಿದೆ. ಬಿಜೆಪಿ ಎಂಟು ಶಾಸಕರನ್ನು ಹೊಂದಿದ್ದು ಅದಕ್ಕೆ ಬಹುಮತಕ್ಕೆ ಇನ್ನೂ 28 ಶಾಸಕರ ಅಗತ್ಯವಿದೆ.
ಅರವಿಂದ ಕೇಜ್ರಿವಾಲ್ ಸರಕಾರವನ್ನು "ಕೆಡವಲು" ನಮ್ಮ ಶಾಸಕರಿಗೆ 20 ಕೋಟಿ ಹಾಗೂ ತಮ್ಮೊಂದಿಗೆ ಹೆಚ್ಚಿನ ಶಾಸಕರನ್ನು ಕರೆ ತಂದರೆ 25 ಕೋಟಿ ರೂ. ಆಫರ್ ಅನ್ನು ಬಿಜೆಪಿ ನೀಡುತ್ತಿದೆ ಎಂದು ಎಎಪಿ ನಾಯಕ ಸೌರಭ್ ಭಾರದ್ವಾಜ್ ನಿನ್ನೆ ಆರೋಪಿಸಿದ್ದಾರೆ.







