ಪೆಗಾಸಸ್ ಪ್ರಕರಣ: 29 ಫೋನ್‍ಗಳಲ್ಲಿ ಸ್ಪೈವೇರ್ ಕಂಡು ಬಂದಿಲ್ಲ ಎಂದ ಸುಪ್ರೀಂ ನೇಮಿತ ತಜ್ಞರ ಸಮಿತಿ
"ಈ ತನಿಖೆಯಲ್ಲಿ ಕೇಂದ್ರ ಸರಕಾರ ಸಹಕಾರ ನೀಡಿಲ್ಲ"

ಹೊಸದಿಲ್ಲಿ: ಪೆಗಾಸಸ್ ಸ್ಪೈವೇರ್(Pegasus Spyware) ಬಳಸಿ ಪ್ರಮುಖ ವ್ಯಕ್ತಿಗಳ ಮೇಲೆ ಅಕ್ರಮವಾಗಿ ಗೂಢಚರ್ಯೆ ಮಾಡಲಾಗಿದೆ ಎಂಬ ಆರೋಪಗಳ ಕುರಿತು ತನಿಖೆಗೆ ಸುಪ್ರೀಂ ಕೋರ್ಟ್ (Supreme Court) ನೇಮಿಸಿದ್ದ ತಜ್ಞರ ಸಮಿತಿ ಗುರುವಾರ ಸುಪ್ರೀಂ ಕೋರ್ಟಿಗೆ ಮಾಹಿತಿ ನೀಡಿ ತಾನು ಪರಿಶೀಲಿಸಿದ 29 ಮೊಬೈಲ್ ಫೋನ್‍ಗಳಲ್ಲಿ ಪೆಗಾಸಸ್ ಸ್ಪೈವೇರ್ ಕಂಡುಬಂದಿರಲಿಲ್ಲ ಎಂದು ಹೇಳಿದೆ.
ಪರಿಶೀಲಿಸಲಾದ ಒಟ್ಟು 29 ಫೋನ್‍ಗಳ ಪೈಕಿ 5 ರಲ್ಲಿ ಕೆಲವು ಮಾಲ್‍ವೇರ್ ಕಂಡುಬಂದಿದೆಯಾದರೂ ಅದು ಪೆಗಾಸಸ್ ಎಂದು ಹೇಳಲು ಸಾಧ್ಯವಿಲ್ಲ ಎಂದು ಸಮಿತಿ ಹೇಳಿದೆ ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ(NV Ramana) ನೇತೃತ್ವದ ಪೀಠ ಹೇಳಿದೆ. ಈ ತನಿಖೆಯಲ್ಲಿ ಕೇಂದ್ರ ಸಹಕಾರ ನೀಡಿಲ್ಲ ಎಂದು ಸಮಿತಿ ತನ್ನ ವರದಿಯಲ್ಲಿ ಹೇಳಿರುವುದನ್ನೂ ಸುಪ್ರೀಂ ಕೋರ್ಟ್ ಗಣನೆಗೆ ತೆಗೆದುಕೊಂಡಿದೆ.
"ನೀವು ಇಲ್ಲಿ (ಸುಪ್ರೀಂ ಕೋರ್ಟ್‍ನಲ್ಲಿ) ತಳೆದ ನಿಲುವನ್ನೇ ಅಲ್ಲಿಯೂ ತಳೆದಿದ್ದೀರಿ" ಎಂದು ಕೇಂದ್ರಕ್ಕೆ ಮುಖ್ಯ ನ್ಯಾಯಮೂರ್ತಿ ಹೇಳಿದರು.
ತಜ್ಞರ ಸಮಿತಿಯನ್ನು ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ನೇಮಿಸಲಾಗಿದ್ದರೆ ಮಧ್ಯಂತರ ವರದಿಯನ್ನು ಈ ವರ್ಷದ ಫೆಬ್ರವರಿಯಲ್ಲಿ ಸಲ್ಲಿಸಲಾಗಿತ್ತು. ಮೇ 20 ರಂದು ಸಮಿತಿಗೆ ತನ್ನ ಅಂತಿಮ ವರದಿ ಸಲ್ಲಿಸಲು ಸುಪ್ರೀಂ ಕೋರ್ಟ್ ಹೆಚ್ಚುವರಿ ಕಾಲಾವಕಾಶ ಒದಗಿಸಿತ್ತು.
ಪೆಗಾಸಸ್ ಗೂಢಚರ್ಯೆ ಬಗ್ಗೆ ತನಿಖೆಗೆ ಕೋರಿ ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ, ದಿ ಹಿಂದು ಪತ್ರಿಕೆಯ ಎನ್ ರಾಮ್, ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ(Editors Guild of India), ರಾಜ್ಯಸಭಾ ಸದಸ್ಯ ಜಾನ್ ಬ್ರಿಟ್ಟಾಸ್, ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂ(Asian College of Journalism) ಅಧ್ಯಕ್ಷ ಶಶಿ ಕುಮಾರ್ ಮತ್ತು ವಕೀಲ ಎಂ ಎಲ್ ಶರ್ಮ ಅರ್ಜಿ ಸಲ್ಲಿಸಿದ್ದರು.







