ಟ್ರಸ್ಟ್ ಹಾಗೂ ಪ್ರತಿಷ್ಠಾನಗಳಿಗೆ ಅಧ್ಯಕ್ಷರ ನೇಮಕ: ವಿವಾದದ ಬಳಿಕ ಆದೇಶ ಹಿಂಪಡೆದ ಸರ್ಕಾರ

ಬೆಂಗಳೂರು: ಟ್ರಸ್ಟ್, ಪ್ರತಿಷ್ಠಾನಗಳಿಗೆ ಅಧ್ಯಕ್ಷರು, ಸದಸ್ಯರ ನೇಮಕಾತಿ ಸಂಬಂಧ ಹೊರಡಿಸಿದ ಆದೇಶವನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿದೆ.
ರಾಜ್ಯ ಸರ್ಕಾರದಿಂದ ರಚಿಸಲ್ಪಟ್ಟಿರುವ ದ.ರಾ. ಬೇಂದ್ರೆ, ಮಾಸ್ತಿ, ಶಿವರಾಮ ಕಾರಂತ ಸೇರಿದಂತೆ 21 ಟ್ರಸ್ಟ್ ಹಾಗೂ ಪ್ರತಿಷ್ಠಾನಗಳ ಅಧ್ಯಕ್ಷರು ಹಾಗೂ ಸದಸ್ಯರ ಅವಧಿ ಮುಕ್ತಾಯವಾದ ಬೆನ್ನಲ್ಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಎಲ್ಲಾ ಟ್ರಸ್ಟ್ ಮತ್ತು ಪ್ರತಿಷ್ಠಾನಗಳಿಗೆ ನೂತನ ಅಧ್ಯಕ್ಷ ಹಾಗೂ ಸದಸ್ಯರನ್ನು ನೇಮಕ ಮಾಡಿ ಸರಕಾರ ಆದೇಶಿಸಿತ್ತು.
ಆದರೆ, ಕೆಲವರಿಂದ ಪ್ರತಿಷ್ಠಾನಗಳ ಅಧ್ಯಕ್ಷ ಸ್ಥಾನ ನಿರಾಕರಣೆ, ನೇಮಕಾತಿಯಲ್ಲಿ ಕೆಲವು ಎಡವಟ್ಟುಗಳು ನಡೆದ ಹಿನ್ನೆಲೆಯಲ್ಲಿ ಆದೇಶವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಾಪಸ್ ಪಡೆದಿದೆ.
'ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ'ದ ಅಧ್ಯಕ್ಷ ಸ್ಥಾನವನ್ನು ಲೇಖಕ, ಅಂಕಣಕಾರ ನರೇಂದ್ರ ರೈ ದೇರ್ಲ ಅವರು ನಿರಾಕರಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ನರೇಂದ್ರ ರೈ ದೇರ್ಲ, 'ತೇಜಸ್ವಿ ಪ್ರತಿಷ್ಠಾನಕ್ಕೆ ಅಧ್ಯಕ್ಷರನ್ನಾಗಿ ನೇಮಕಗೊಳಿಸಿರುವ ಈ ಸರಕಾರಕ್ಕೆ ನನ್ನ ಧನ್ಯವಾದಗಳು .ಆದರೆ ವೈಯಕ್ತಿಕ ಕಾರಣಗಳಿಂದಾಗಿ ಸಂಬಂಧಿಸಿದ ಜವಾಬ್ದಾರಿಯನ್ನು ನಾನು ಸ್ವೀಕರಿಸುವುದಿಲ್ಲ' ಎಂದು ತಿಳಿಸಿದ್ದಾರೆ.
ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಸದಸ್ಯರನ್ನಾಗಿ ತೇಜಸ್ವಿ ಪತ್ನಿ ರಾಜೇಶ್ವರಿ ಅವರನ್ನು ನೇಮಕ ಮಾಡಲಾಗಿತ್ತು. ರಾಜೇಶ್ವರಿ ಅವರು ಕಳೆದ ಡಿಸೆಂಬರ್‌ನಲ್ಲಿ ನಿಧನರಾಗಿದ್ದರು. ನಿಧನರಾಗಿದ್ದರೂ ಸರ್ಕಾರ ಮತ್ತೆ ಅವರ ಹೆಸರನ್ನು ಆಯ್ಕೆ ಮಾಡಿದ್ದಕ್ಕ ಟೀಕೆ ವ್ಯಕ್ತವಾಗಿತ್ತು.
ಹಾವೇರಿಯ ಗಳಗನಾಥ ಮತ್ತು ನಾ.ಶ್ರೀ. ರಾಜಪುರೋಹಿತ ಪ್ರತಿಷ್ಠಾನದ ಅಧ್ಯಕ್ಷರಾಗಿ ಚಕ್ರವರ್ತಿ ಸೂಲಿಬೆಲೆ ರನ್ನು ನೇಮಕ ಮಾಡಲಾಗಿದೆ. ಆದರೆ ರಾಜ್ಯ ಸರ್ಕಾರದ ನೇಮಕಾತಿಯನ್ನು ಸೂಲಿಬೆಲೆ ತಿರಸ್ಕರಿಸಿ, ನೇಮಕಾತಿ ಸ್ಥಾನ ಮರಳಿಸಿದ್ದಾರೆ.








