ಜವಾಹರಲಾಲ್ ನೆಹರೂ ಅವಮಾನ ಸಹಿಸಲಾಗದು : ಮಾಜಿ ಸಚಿವ ರಮಾನಾಥ ರೈ

ಮಂಗಳೂರು: ಅಗರ್ಭ ಶ್ರೀಮಂತರಾಗಿ ಹುಟ್ಟಿದ್ದರೂ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡು ಜೈಲು ಶಿಕ್ಷೆ ಅನುಭವಿಸಿದ್ದಲ್ಲದೆ, ಸ್ವಾತಂತ್ರ್ಯ ನಂತರದ ಭಾರತದ ಅಭಿವೃದ್ಧಿಗಾಗಿ ಶ್ರಮಿಸಿದ, ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಅವಮಾನವನ್ನು ಸಹಿಸಲಾಗದು ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ಅಹಿಂಸಾತ್ಮಕವಾಗಿ ಹೋರಾಟ ಮಾಡಿದ ಮಹಾತ್ಮ ಗಾಂಧಿಯವರನ್ನು ಹತ್ಯೆ ಮಾಡಿದವರನ್ನು ವೈಭವೀಕರಿಸುವ ಕಾಲ ಬಂದಿದೆ. ನೆಹರೂ ಕುಟುಂಬವನ್ನು ಅವಮಾನಿಸುವ ಅವರು ದೇಶಕ್ಕಾಗಿ ಮಾಡಿರುವ ಕೆಲಸವನ್ನು ಗೌಣ ಮಾಡಿಸುವ ಪ್ರಯತ್ನ ನಡೆಯುತ್ತಿದೆ. ಈ ರೀತಿ ನೈಜ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನ ಮಾಡುವುದನ್ನು ರಾಜ್ಯ ಅಥವಾ ಜಿಲ್ಲೆಯ ಜನ ಸಹಿಸಲು ಸಾಧ್ಯವಿಲ್ಲ ಎಂದರು.
ರಾಜ್ಯ ಸರಕಾರ ತನ್ನ ಜಾಹೀರಾತಿನಲ್ಲಿ ಪ್ರಥಮ ಪ್ರಧಾನಿಯ ಫೋಟೋವನ್ನೇ ಕಣ್ಮರೆಯಾಗಿಸಿರುವುದು ನಿಜವಾದ ದೇಶಭಕ್ತರಿಗೆ ನೋವು ತರುವ ವಿಚಾರ. ಬ್ರಿಟಿಷರು ದೇಶವನ್ನು ಬಿಟ್ಟು ಹೋದಾಗ ದೇಶವನ್ನು ವಿಭಜನೆ ಮಾಡಿಯೇ ಪಾಕಿಸ್ತಾನಕ್ಕೆ ಮೊದಲು ಸ್ವಾತಂತ್ರ್ಯ ನೀಡಿ ಮರುದಿನ ನಮಗೆ ನೀಡಿದ್ದು, ಆ ದಿನಗಳ ಹೋರಾಟದಲ್ಲಿ ಅಂದು ಸ್ವಾತಂತ್ರ್ಯ ಹೋರಾಟಗಾರರು ಅನುಭವಿಸಿದ್ದನ್ನು ಇಂದು ಅವಮಾನಿಸುವವರು ಕಂಡಿದ್ದರೆ ಇಂತಹ ಅವಮಾನ ಮಾಡಲು ಸಾಧ್ಯವಿರಲಿಲ್ಲ. ಬ್ರಿಟಿಷರು ಬಿಟ್ಟು ಹೋದಾಗ ದೇಶದಲ್ಲಿ ಯಾವುದೇ ವ್ಯವಸ್ಥೆಗಳಿರಲಿಲ್ಲ. ನೆಹರೂ ಅವರು ದೇಶದ ಪ್ರಥಮ ಪ್ರಧಾನಿಯಾಗಿ ಅನೇಕ ಅಣೆಕಟ್ಟು, ವಿಶ್ವವಿದ್ಯಾನಿಲಯ ನಿರ್ಮಾಣ ಮಾಡಿದ್ದಾರೆ. ದ.ಕ. ಜಿಲ್ಲೆಯಲ್ಲೂ ಶ್ರೀನಿವಾಸ ಮಲ್ಯರ ಮೇಲಿನ ಪ್ರೀತಿ, ಅಭಿಮಾನದಿಂದ ನೆಹರೂರವರು ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ 66 ಮತ್ತು 75, ವಿಮಾನ ನಿಲ್ದಾಣ, ಎನ್‌ಎಂಪಿಟಿ, ಎನ್‌ಐಟಿಕೆಯಂತಹ ಸಂಸ್ಥೆಗಳು ಶ್ರೀನಿವಾಸರು ನೆಹರೂ ಅವರ ಮೂಲಕ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಇಂದು ಆ ವಿಮಾನ ನಿಲ್ದಾಣವನ್ನು ಮಾರಾಟ ಮಾಡಲಾಗಿದೆ. ಎನ್‌ಎಂಪಿಟಿ ಮಾರಾಟ ಹಂತದಲ್ಲಿದೆ. ಬ್ಯಾಂಕ್‌ಗಳನ್ನು ಈಗಾಗಲೇ ಮಾರಾಟ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಎಲ್‌ಐಸಿ, ರೈಲ್ವೇಯನ್ನೂ ಖಾಸಗಿಯವರಿಗೆ ನೀಡಲು ತಯಾರಿ ನಡೆದಿದೆ. ಬ್ರಿಟಿಷರ ಕಾಲದಲ್ಲಿ ಕೇಂದ್ರ ಮೈದಾನವೆಂದು ಕರೆಯಲ್ಪಡುತ್ತಿದ್ದ ನೆಹರೂ ಮೈದಾನವನ್ನು ಮತ್ತೆ ಕೇಂದ್ರ ಮೈದಾನವೆಂದೇ ಕರೆಯಲಾಗುತ್ತಿದೆ. ಇದು ಸರಿಯೇ ಎಂದು ರಮಾನಾಥ ರೈ ಪ್ರಶ್ನಿಸಿದರು.
ಸ್ವಾತಂತ್ರ್ಯಕ್ಕಾಗಿ ಯಾರೆಲ್ಲಾ ಹೋರಾಟ ನಡೆಸಿದ್ದಾರೆ. ಈ ನಡುವೆ ಕೆಲವರು ಹೋರಾಟವನ್ನು ಮಧ್ಯದಲ್ಲಿ ಬಿಟ್ಟು ಹೋಗಿದ್ದಾರೆ. ಸ್ವಾತಂತ್ರ್ಯದ ಹೋರಾಟಕ್ಕೆ ಒಂದು ಗುರಿ ಇತ್ತು. ಅದನ್ನು ತಲುಪಬೇಕು. ಆ ಬಗ್ಗೆ ಇತಿಹಾಸ ಹೇಳುತ್ತದೆ. ವಾಟ್ಸಾಪ್‌ಗಳಲ್ಲಿ ಹೇಳುವ ಇತಿಹಾಸ ಬಗ್ಗೆ ಮಾತನಾಡುವುದಿಲ್ಲ. ಆದರೆ ದೇಶದ ಪ್ರಮುಖ ಬರಹಗಾರರು ಸ್ವಾತಂತ್ರ್ಯ ದೊರೆತ ಸಂದರ್ಭದ ಇತಿಹಾಸವನ್ನು ಬರೆದಿದ್ದಾರೆ. ಅದರಲ್ಲಿ ಸ್ವಾತಂತ್ರ್ಯ ಹೋರಾಟದ ನೈಜ ಹೋರಾಟಗಾರರು ಯಾರೆಂಬುದು ತಿಳಿಯುತ್ತದೆ. ಸೂಲಿಬೆಲೆ ಬರೆದ ಪುಸ್ತಕದಿಂದ ಅಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ರಮಾನಾಥ ರೈ ಪ್ರತಿಕ್ರಿಯಿಸಿದರು.
ಗೋಷ್ಠಿಯಲ್ಲಿ ಮುಖಂಡರಾದ ಶಶಿಧರ ಹೆಗ್ಡೆ, ಸಾಹುಲ್ ಹಮೀದ್, ವಿಶ್ವಾಸ್ ಕುಮಾರ್ ದಾಸ್, ಶ್ಯಾಲೆಟ್ ಪಿಂಟೋ, ಸುಧೀರ್ ಟಿ.ಕೆ., ಸಲೀಂ, ಪ್ರಕಾಶ್ ಸಾಲಿಯಾನ್, ನೀರಜ್ ಪಾಲ್, ಜೋಕಿಂ, ಬೇಬಿ ಕುಂದರ್, ಸುಭಾಶ್ಚಂದ್ರ, ಮಲ್ಲಿಕಾ ಪಕಳ, ಉಮೇಶ್ ದಂಡಕೇರಿ, ನಝೀರ್ ಬಜಾಲ್, ಶಬೀರ್ ಮೊದಲಾದವರು ಉಪಸ್ಥಿತರಿದ್ದರು.









