ಆ.28ರಂದು ಮಂಗಳೂರು ವಿವಿಯಲ್ಲಿ ಪ್ರೊ. ಇವಿ ರಾಮಕೃಷ್ಣರಿಂದ ಉಪನ್ಯಾಸ
ನಾರಾಯಣಗುರು ಅಧ್ಯಯನ ಪೀಠ ಸಹಭಾಗಿತ್ವ

ಮಂಗಳೂರು: ಪಿಪಿ ಗೋಮತಿ ಸ್ಮಾರಕ ಶಿಕ್ಷಣ ಟ್ರಸ್ಟ್ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠದ ಆಶ್ರಯದಲ್ಲಿ ಆ.28ರಂದು ಗುಜರಾತ್‌ನ ಸೆಂಟ್ರಲ್ ಯುನಿವರ್ಸಿಟಿಯ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಇ.ವಿ.. ರಾಮಕೃಷ್ಣನ್ ಅವರಿಂದ ‘ಶ್ರೀ ನಾರಾಯಣ ಗುರು: ಸಂತ, ಸುಧಾರಕ, ಕವಿ’ ಎಂಬ ವಿಷಯದಲ್ಲಿ ಉಪನ್ಯಾಸವನ್ನು ಆಯೋಜಿಸಲಾಗಿದೆ.
ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಸಂಜೆ 4.30ಕ್ಕೆ ಈ ವಿನತೂನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಪ್ರೊ.ಪಿ.ಪಿ.ಗೋಮತಿ ಅವರು ಮಂಗಳೂರಿನ ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕೆಲಸ ಮಾಡಿದವರು. 1984 ರಲ್ಲಿ ನಿವೃತ್ತರಾದ ನಂತರ ಅಕ್ಟೋಬರ್ 2014 ರಲ್ಲಿ ಅವರ ಮರಣದವರೆಗೂ ಮಂಗಳೂರಿನ ರಾಷ್ಟ್ರೀಯ ಮಹಿಳಾ ಶಿಕ್ಷಣ ಸೊಸೈಟಿಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.
ಪಿ.ಪಿ.ಗೋಮತಿಯವರು ಯಾವುದೇ ಪ್ರಕಾರದ ತಾರತಮ್ಯ ಇಲ್ಲದ ಸಮಾಜದ ಕನಸು ಕಂಡವರು. ನಮ್ಮ ಪ್ರತಿಯೊಂದು ಹೆಜ್ಜೆಗಳು ಸರಿಯಾದ ದಿಕ್ಕಿನಲ್ಲಿದ್ದರೆ ನಮ್ಮನ್ನು ಆ ಹೆಜ್ಜೆಗಳು ಆದರ್ಶ ಜಗತ್ತಿನತ್ತ ಕೊಂಡಯ್ಯಬಲ್ಲವು ಎಂದು ಆಶಿಸಿದ್ದರು. ಪಿ.ಪಿ.ಗೋಮತಿ ಸ್ಮಾರಕ ಶಿಕ್ಷಣ ಟ್ರಸ್ಟ್ ಅತ್ಯುತ್ತಮ ಶೈಕ್ಷಣಿಕ ಅರ್ಹತೆಯನ್ನು ಹೊಂದಿರುವ ಆರ್ಥಿಕ ಬಡ ವಿದ್ಯಾರ್ಥಿನಿಯರಿಗೆ ಪ್ರತಿ ವರ್ಷ 1,00,000 ರೂ.ಗಳ ವಿದ್ಯಾರ್ಥಿ ವೇತನವನ್ನು ಒದಗಿಸುತ್ತಿದೆ. ಮಂಗಳೂರಿನಲ್ಲಿ ಖ್ಯಾತ ವಿದ್ವಾಂಸರು, ಶಿಕ್ಷಣ ತಜ್ಞರು ಅಥವಾ ಸಾಮಾಜಿಕ ಕಾರ್ಯಕರ್ತರ ಉಪನ್ಯಾಸಗಳನ್ನು ಸಹ ಆಯೋಜಿಸುತ್ತಿದೆ.
ಗುಜರಾತ್‌ನ ಸೆಂಟ್ರಲ್ ಯುನಿವರ್ಸಿಟಿಯ ಖ್ಯಾತ ಪ್ರೊಫೆಸರ್ ಆಗಿರುವ ಪ್ರೊ. ಇ.ವಿ. ರಾಮಕೃಷ್ಣನ್, ಬೋಧನೆ ಮತ್ತು ಸಂಶೋಧನೆಯಲ್ಲಿ ನಲವತ್ತೊಂದು ವರ್ಷಗಳಿಗಿಂತ ಅಧಿಕ ಅನುಭವ ಹೊಂದಿರುವ ಖ್ಯಾತ ಶಿಕ್ಷಣ ತಜ್ಞ. ಇಂಗ್ಲಿಷ್ ಮತ್ತು ಮಲಯಾಳಂಗಳಲ್ಲಿ ಕವನ ಮತ್ತು ವಿಮರ್ಶೆಗಳನ್ನು ಪ್ರಕಟಿಸಿರುವ ದ್ವಿಭಾಷಾ ಬರಹಗಾರ.
2010ರಲ್ಲಿ ಗುಜರಾತ್‌ನ ಸೆಂಟ್ರಲ್ ಯುನಿವರ್ಸಿಟಿಯಲ್ಲಿ ಪ್ರೊಫೆಸರ್ ಆಗಿ ವೃತ್ತಿ ಆರಂಭಿಸುವ ಮೊದಲು ಅವರು ಹೈದರಾಬಾದ್‌ನ ಇಎಫ್‌ಎಲ್ ಯುನಿವರ್ಸಿಟಿ, ಮಹಾರಾಷ್ಟ್ರ ಜಲ್ನಾದ ಜೆ.ಇ.ಎಸ್. ಯುನಿವರ್ಸಿಟಿ, ಸೂರತ್‌ನ ವೀರ್ ನರ್ಮದ್ ಸೌತ್ ಗುಜರಾತ್ ಯುನಿವರ್ಸಿಟಿಯಂತಹ ವಿವಿಧ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮತ್ತೊಂದು ವಿಶೇಷ ಆಕರ್ಷಣೆಯಾಗಿ ನಾರಾಯಣ ಗುರು ವಿರಚಿತ ಕಾವ್ಯದ ಹಾಡುಗಾರಿಕೆ ನಡೆಯಲಿದೆ. ಕರ್ನಾಟಕ ಸಂಗೀತ ಕ್ಷೇತ್ರದ ಉತ್ಕೃಷ್ಟ ಗಾಯಕರಲ್ಲಿ ಓರ್ವರಾದ ವಿದ್ವಾನ್ ಟಿಎಂ ಕೃಷ್ಣ ಹಾಗೂ ತಂಡದಿಂದ ಈ ಕಾರ್ಯಕ್ರಮ ನಡೆಯಲಿದೆ. ಅಕ್ಕರೈ ಶುಭಲಕ್ಷ್ಮಿ ವಯಲಿನ್‌ನಲ್ಲಿ, ಅರುಣ್ ಪ್ರಕಾಶ್ ಮೃದಂಗದಲ್ಲಿ ಹಾಗೂ ಚಂದ್ರಶೇಖರ ಶರ್ಮ ಘಟಂನಲ್ಲಿ ಸಹಕರಿಸಲಿದ್ದಾರೆ. ಸೆ.9ರಂದು ಬ್ರಹ್ಮಶ್ರೀ ನಾರಾಯಣಗುರುಗಳ ಜಯಂತಿಯ ಸಂದರ್ಭದಲ್ಲೇ ಮಂಗಳೂರಿನಲ್ಲಿ ಈ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.