'ನಾನು ರಾಜಾ ತೋಮರ್ ವಂಶಸ್ಥ, ಕುತುಬ್ ಮಿನಾರ್ ನಮಗೆ ಸೇರಿದ್ದು' ಎಂದು ಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ

ಹೊಸದಿಲ್ಲಿ: ರಾಜಧಾನಿಯ ಐತಿಹಾಸಿಕ ಸ್ಮಾರಕ ಕುತುಬ್ ಮಿನಾರ್‍ನಲ್ಲಿ(Qutub Minar) ಪ್ರಾರ್ಥನೆಗೆ ಅವಕಾಶ ನೀಡಬೇಕೆಂಬ ಹಲವು ಅರ್ಜಿಗಳು ವಿಚಾರನೆಗೆ ಬಾಕಿಯಿರುವಂತೆಯೇ ದಿಲ್ಲಿಯ ತೋಮರ್ ರಾಜಮನೆತನದ ವಂಶಸ್ಥ ತಾನೆಂದು ಹೇಳಿಕೊಂಡಿರುವ ಕುನ್ವರ್ ಮಹೇಂದರ್ ಧ್ವಜ್ ಪ್ರಸಾದ್ ಸಿಂಗ್ ಎಂಬಾತ ಈ ಪ್ರಕರಣದಲ್ಲಿ ಮಧ್ಯಪ್ರವೇಶ ಅರ್ಜಿ ಸಲ್ಲಿಸಿದ್ದಾರೆ.
ಕುತುಬ್ ಸಂಕೀರ್ಣ ಮತ್ತು ಜಮೀನು ತನ್ನ ಕುಟುಂಬಕ್ಕೆ ಸೇರಿದ್ದು ಈ ಕುರಿತು ಯಾವುದೇ ಆದೇಶ ಹಾಗೂ ನಿರ್ಧಾರ ಕೈಗೊಳ್ಳಲು ಸರಕಾರಕ್ಕೆ ಅಧಿಕಾರವಿಲ್ಲ ಎಂದು ಆತ ತನ್ನ ಅರ್ಜಿಯಲ್ಲಿ ಹೇಳಿದ್ಧಾರೆ.
ಆದರೆ ಸಿಂಗ್ ಅರ್ಜಿಯನ್ನು ಭಾರತದ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮತ್ತು ಹಿಂದು ಅರ್ಜಿದಾರರು ವಿರೋಧಿಸಿದ್ದಾರೆ.
ಕುತುಬ್ ಮಿನಾರ್ ಸಂಕೀರ್ಣದಲ್ಲಿರುವ ಖುವ್ವತುಲ್ ಇಸ್ಲಾಂ ಮಸೀದಿಯಲ್ಲಿ ನರಸಿಂಹ ದೇವರದ್ದೆಂದು ಹೇಳಲಾದ ಮೂರ್ತಿಗಳ ಪತ್ತೆಯಾಗಿವೆ ಎಂದು ಹೇಳಿಕೊಂಡು ಅಲ್ಲಿ ಪ್ರಾರ್ಥನೆಗೆ ಅವಕಾಶ ನೀಡಬೇಕೆಂದು ಹಲವರು ಅರ್ಜಿ ಸಲ್ಲಿಸಿದ್ದರು. ಇದರ ನಡುವೆ ಎಎಸ್‍ಐನ ಮಾಜಿ ಪ್ರಾದೇಶಿಕ ನಿರ್ದೇಶಕ ಧರ್ಮವೀರ್ ಶರ್ಮ ಅವರು ಕುತುಬ್ ಮಿನಾರ್ ಅನ್ನು ರಾಜಾ ವಿಕ್ರಮಾದಿತ್ಯ ನಿರ್ಮಿಸಿದ್ದನೇ ಹೊರತು ಕುತುಬುದ್ದೀನ್ ಐಬಕ್ ಎಂದು ಹೇಳಿದ್ದೂ ವಿವಾದಕ್ಕೀಡಾಗಿತ್ತು.
ಕಳೆದ 100 ವರ್ಷಗಳಲ್ಲಿ ಈ ವಿಚಾರ ಪ್ರಸ್ತಾಪಿಸದವರು ಈಗ ದಿಢೀರನೇ ಪ್ರಸ್ತಾಪಿಸಿದ್ದೇಕೆ ಎಂದು ತೀರ್ಥಂಕರ ರಿಷಭ್ ದೇವ ಅವರ ಭಕ್ತರ ಪರ ವಾದಿಸುತ್ತಿರುವ ವಕೀಲರು ಹೇಳಿದ್ದಾರೆ.
ತರುವಾಯ ಮಧ್ಯಪ್ರವೇಶ ಅರ್ಜಿ ಸಲ್ಲಿಸಿದವರಿಗೆ ತಮ್ಮ ವಾದ ಮಂಡನೆಗೆ ನ್ಯಾಯಾಲಯ ಒಂದು ಕೊನೆಯ ಅವಕಾಶ ನೀಡಿದೆ. ಮುಂದಿನ ವಿಚಾರಣೆ ಸೆಪ್ಟೆಂಬರ್ 13ಕ್ಕೆ ನಿಗದಿಯಾಗಿದೆ.







