ನನ್ನ ಜೊತೆ ವ್ಯವಹಾರ ಮಾಡಿದವರಿಗೆಲ್ಲ CBI ನೋಟಿಸ್ ನೀಡಿದೆ, ಕಿರುಕುಳಕ್ಕೂ ಒಂದು ಮಿತಿ ಇರಬೇಕು: ಡಿ.ಕೆ.ಶಿವಕುಮಾರ್

ಬೆಂಗಳೂರು, ಆ.25: ಕೆಪಿಸಿಸಿ ಕಾರ್ಯದರ್ಶಿ ಹಾಗೂ ನನ್ನ ಆಪ್ತ ವಿಜಯ್ ಮುಳಗುಂದ್ ಅವರೊಬ್ಬರಿಗೆ ಮಾತ್ರ ಅಲ್ಲ, ನನ್ನ ಜತೆ ವ್ಯಾಪಾರ ವಹಿವಾಟು ಮಾಡಿರುವ, ಆಪ್ತರ ಪೈಕಿ 70-80 ಜನರಿಗೆ ನೀಡಿದ್ದಾರೆ. ಕಿರುಕುಳಕ್ಕೂ ಒಂದು ಮಿತಿ ಇರಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D. K. Shivakumar) ಕಿಡಿಗಾರಿದರು.
ಗುರುವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಇದನ್ನು ಕಾನೂನು ಪ್ರಕಾರ ಎದುರಿಸಬೇಕು ಎಂದು ಮೌನವಾಗಿದ್ದೇನೆ. ಈ ಪ್ರಕರಣಗಳ ವಿರುದ್ಧ ಹೈಕೋರ್ಟ್‍ನಲ್ಲಿ ಅರ್ಜಿ ಹಾಕಿದ್ದೇನೆ. ಜತೆಗೆ ಚುನಾವಣೆ ನಡೆಯುವವರೆಗೂ ನನಗೆ ಕಾಲಾವಕಾಶ ನೀಡಿ ನಂತರ ಮುಂದೆ ಎದುರಿಸುತ್ತೇವೆ ಎಂದು ಮನವಿ ಮಾಡಿದ್ದೇನೆ ಎಂದರು.
ಬಿಜೆಪಿಯ ಶಾಸಕರು, ಮಂತ್ರಿಗಳ ಅಕ್ರಮ ಆಸ್ತಿಗಳನ್ನು ತೆಗೆಯಲಿ. ಅವರ ಆಸ್ತಿ ಎಷ್ಟಿತ್ತು, ಅವರ ಮಕ್ಕಳು, ಕಂಪನಿಗಳ ಆಸ್ತಿ ಎಷ್ಟಾಗಿದೆ ಎಂದು ತನಿಖೆ ಮಾಡಿಸಲಿ. ನನ್ನ ಬಳಿಯು ಮಾಹಿತಿ ಇದೆ. ಸಮಯ ಬರಲಿ ಮಾತನಾಡುತ್ತೇನೆ ಎಂದು ಅವರು ತಿಳಿಸಿದರು.
40 ಪರ್ಸೆಂಟ್ ಕಮಿಷನ್ ವಿಚಾರದಲ್ಲಿ ಸಾಕ್ಷಿ ಕೇಳಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಕೆಂಪಣ್ಣ ಅವರು ಪ್ರಧಾನಿಗೆ ಪತ್ರ ಬರೆದು 1 ವರ್ಷ ಆಗಿದೆ. ನೀವು ಸತ್ಯವಂತರಾಗಿದ್ದರೆ ನ್ಯಾಯಾಂಗ ತನಿಖೆ ಮಾಡಿಸಿ. ಭಯ ಯಾಕೆ?’ ಬಿಜೆಪಿ ನಾಯಕರಾದ ವಿಶ್ವನಾಥ್, ಯತ್ನಾಳ್ ಅವರೇ ಸರಕಾರದ ಅಕ್ರಮಗಳ ಬಗ್ಗೆ ಮಾತನಾಡಿದ್ದು, ಆ ಬಗ್ಗೆ ಬೊಮ್ಮಾಯಿ ಅವರು ಯಾಕೆ ಮಾತನಾಡುತ್ತಿಲ್ಲ. ಅವರ ಆರೋಪ ಸುಳ್ಳಾಗಿದ್ದರೆ ಅವರ ವಿರುದ್ಧ ಪ್ರಕರಣ ಯಾಕೆ ದಾಖಲಿಸುತ್ತಿಲ್ಲ?’ ಎಂದು ಪ್ರಶ್ನಿಸಿದರು.
ಚುನಾವಣೆ ಸಮೀಪಿಸುತ್ತಿದ್ದಂತೆ ನಿಮ್ಮನ್ನು ಟಾರ್ಗೆಟ್ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ‘ಬಿಜೆಪಿಯ ಆಂತರಿಕ ವಿಚಾರದ ಬಗ್ಗೆ ಅಲ್ಲಿರುವವರೇ ನಮಗೆ ಮಾಹಿತಿ ನೀಡುತ್ತಿದ್ದಾರೆ. ಈ ದೇಶದ ಕಾನೂನಿನ ಬಗ್ಗೆ ನನಗೆ ಗೌರವವಿದೆ. ನನ್ನ ಪ್ರಾಮಾಣಿಕತೆ ಬಗ್ಗೆ ನನಗೆ ನಂಬಿಕೆ ಇದೆ. ಅವರು ಏನಾದರೂ ಮಾಡಿಕೊಳ್ಳಲಿ. ನಾನು ಎಲ್ಲವನ್ನು ಎದುರಿಸಲು ಸಿದ್ಧ ಎಂದರು.
ನನ್ನ ತಾಯಿಯ ಆಸ್ತಿಯನ್ನು ನನ್ನ ಬೇನಾಮಿ ಆಸ್ತಿ ಎಂದು ಸೀಸ್ ಮಾಡಿದ್ದಾರೆ. ತಾಯಿ ಆಸ್ತಿಯನ್ನು ಮಗನ ಬೇನಾಮಿ ಆಸ್ತಿ ಎಂದರೆ ಇದಕ್ಕಿಂತ ಷಡ್ಯಂತ್ರ ಬೇರೆ ಏನಿದೆ? ಕಿರುಕುಳಕ್ಕೂ ಒಂದು ಮಿತಿ ಇರಬೇಕು. ಅವರು ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳಲಿ. ನನ್ನ ಮೇಲೆ ಹಾಕಿರುವ ಎಲ್ಲ ಪ್ರಕರಣಗಳ ಪಟ್ಟಿ ಮಾಡಿಸಿದ್ದೇನೆ ಎಂದು ಶಿವಕುಮಾರ್ ತಿಳಿಸಿದರು.







