ಕೊಪ್ಪ: 15 ದಿನಗಳಿಂದ ರೈತರು, ಗ್ರಾಮಸ್ಥರ ನಿದ್ದೆಗೆಡಿಸಿದ್ದ ಕಾಡಾನೆಯ ಸೆರೆ

ಚಿಕ್ಕಮಗಳೂರು, ಆ.25: ಹಗಲುವೇಳೆ ಕಾಫಿತೋಟಗಳಲ್ಲಿ ದಾಂಧಲೆ ನಡೆಸಿ ಸಂಜೆಯಾಗುತ್ತಿದ್ದಂತೆ ಬೆಟ್ಟದ ಮೇಲೆ ಪ್ರಪಾತದ ಸಮೀಪದಲ್ಲಿ ಆಶ್ರಯ ಪಡೆಯುತ್ತಾ ಅರಣ್ಯ ಇಲಾಖೆ ಸಿಬ್ಬಂದಿಗೆ ಕಳೆದ 15 ದಿನಗಳಿಂದ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಹಾವೇರಿ ಟಸ್ಕರ್ ಕಾಡಾನೆಯನ್ನು (Elephant) ಖೆಡ್ಡಾಕ್ಕೆ ಬೀಳಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕೊನೆಗೂ ಯಶಸ್ವಿಯಾಗಿದ್ದಾರೆ.
ಮೂಡಿಗೆರೆ, ಚಿಕ್ಕಮಗಳೂರು ತಾಲೂಕು ವ್ಯಾಪ್ತಿಯಲ್ಲಿ ಬೆಳೆಗಾರರಿಗೆ ಕಾಟ ನೀಡುತ್ತಿದ್ದ ಕಾಡಾನೆಗಳ ಹಾವಳಿ ಸದ್ಯ ಕೊಪ್ಪ ತಾಲೂಕಿಗೂ ಕಾಲಿಟ್ಟಿದ್ದು, ತಾಲೂಕಿನ ಜಯಪುರ ಹೋಬಳಿ ವ್ಯಾಪ್ತಿಯ ರೈತರು, ಗ್ರಾಮೀಣ ಪ್ರದೇಶದ ಜನರಿಗೆ ಕಳೆದೊಂದು ತಿಂಗಳಿನಿಂದ ಕಾಡಾನೆ ಹಾವಳಿ ಭಾರೀ ಮೂಡಿಸಿತ್ತು. ಕೊಪ್ಪ ತಾಲೂಕಿನ ಸುತ್ತಮುತ್ತಲ ಹಾವೇರಿ ಟಸ್ಕರ್ ಕಾಡಾನೆ ಪುಂಡಾಟಿಕೆ ಮೆರೆಯುತ್ತಿದ್ದು, ಹಗಲು ವೇಳೆ ಕಾಫಿತೋಟ ಸೇರಿದಂತೆ ಜಮೀನುಗಳಿಗೆ ದಾಳಿ ಇಟ್ಟು ಬೆಳೆ ನಾಶ ಮಾಡುತ್ತಿತ್ತು. ತೋಟಗಳಲ್ಲಿ ಸಂಚರಿಸಲು ಇಲ್ಲಿನ ಜನರು ಭಯಪಡುತ್ತಿದ್ದರು. ಕಾಡಾನೆಯನ್ನು ಸೆರೆಹಿಡಿಯುವಂತೆ ಸಾರ್ವಜನಿಕರಿಂದ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಕಾಡಾನೆ ಸೆರೆ ಹಿಡಿಯಲು ಕಾರ್ಯಾಚರಣೆಗೆ ಮುಂದಾಗಿದ್ದರು.
ಈ ಆನೆಯನ್ನು ಸೆರೆ ಹಿಡಿಯಲು ಸಾಕಾನೆಗಳನ್ನು ಅರಣ್ಯ ಇಲಾಖೆ ಸ್ಥಳಕ್ಕೆ ಕರೆತಂದಿದ್ದು, ಕಳೆದ 15 ದಿನಗಳಿಂದ ಟಸ್ಕರ್ ಆನೆಯನ್ನು ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭಿಸಿದ್ದರು. ಹೆಣ್ಣಾನೆಯೊಂದನ್ನು ಕರೆ ತಂದಿದ್ದ ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿ ಹಾವೇರಿ ಟಸ್ಕರ್ ಆನೆಯನ್ನು ಹೆಣ್ಣಾನೆಯ ಮೋಹಕ್ಕೆ ಬೀಳಿಸಿ ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭಿಸಿದ್ದರು. ಆದರೆ ಈ ಹಿಂದೆ ಇದೇ ಹೆಣ್ಣಾನೆಯ ಮೋಹಕ್ಕೆ ಬಿದ್ದು ಸೆರೆಯಾಗಿದ್ದ ಹಾವೇರಿ ಟಸ್ಕರ್ ಬುದ್ದಿವಂತಿಕೆ ಪ್ರದರ್ಶಿಸಿ ಹೆಣ್ಣಾನೆಯ ಮೋಹಕ್ಕೆ ಬೀಳುತ್ತಿರಲಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದು, ಈ ಕಾರಣದಿಂದಾಗಿ ಹಾವೇರಿ ಟಸ್ಕರ್ ಆನೆಯನ್ನು ಸೆರೆ ಹಿಡಿಯಲು ತಡವಾಗಿದೆ ಎಂದು ತಿಳಿಸಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿ ಎಷ್ಟೇ ಪ್ರಯತ್ನಿಸಿದರೂ ಆನೆಯನ್ನು ಸೆರೆ ಹಿಡಿಯಲು ಸಾಧ್ಯವಾಗಿರಲಿಲ್ಲ. ಪ್ರಪಾತದ ಸಮೀಪದಲ್ಲಿ ಹೋಗಿ ಆಶ್ರಯ ಪಡೆದುಕೊಳ್ಳುತ್ತಿದ್ದ ಹಾವೇರಿ ಟಸ್ಕರನ್ನು ಈ ಸ್ಥಳದಿಂದ ಅಟ್ಟು ವುದು ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಈ ಹಿನ್ನಲೆಯಲ್ಲಿ 5ಸಾಕಾನೆಯನ್ನು ಕರೆಸಿಕೊಂಡು ಹೆಣ್ಣಾನೆ ಮೋಹಕ್ಕೆ ಬೀಳಿಸಿ ಹಾವೇರಿ ಟಸ್ಕರ್ ಹಿಡಿಯುವ ಉಪಾಯ ಮಾಡಿದ್ದೆವು. ಆನೆಯನ್ನು ಮಾತ್ರ ಹಿಡಿಯುವುದು ಸಾಧ್ಯವಾಗಿಲ್ಲ ಎಂದರು.
ಗುರುವಾರ ಆಹಾರ ಅರಸಿ ಕಾಫಿತೋಟಕ್ಕೆ ನುಗ್ಗಿದ್ದ ಆನೆಯನ್ನು 5ಸಾಕಾನೆಗಳ ಸಹಾಯದಿಂದ ಸೆರೆ ಹಿಡಿದಿದ್ದೇವೆ. ಹಾವೇರಿಯಲ್ಲಿ ಈ ಆನೆಯನ್ನು ಹಿಂದೆ ಸೆರೆ ಹಿಡಿಯಲಾಗಿತ್ತು. ನಂತರ ಮತ್ತೆ ಕಾಡಿಗೆ ಬಿಡಲಾಗಿತ್ತು. ಹಿಂದೊಮ್ಮೆ ಹೆಣ್ಣಾನೆಯ ಮೋಹಕ್ಕೆ ಬೀಳಿಸಿ ಈ ಆನೆಯನ್ನು ಸೆರೆ ಹಿಡಿಯಲಾಗಿತ್ತು. ಹಿಂದೆ ಕಾರ್ಯಾಚರಣೆಗೆ ಬಳಸಿದ್ದ ಹೆಣ್ಣಾನೆಯನ್ನೇ ಈಗ ಮತ್ತೆ ಬಳಸಿದ್ದೆವು. ಇದನ್ನು ಅರಿತ ಹಾವೇರಿ ಟಸ್ಕರ್ ಹೆಣ್ಣಾನೆಯ ಮೋಹಕ್ಕೊಳಗಾಗುತ್ತಿರಲಿಲ್ಲ. ಇದರಿಂದ ಹಾವೇರಿ ಟಸ್ಕರ್ ಸೆರೆ ಹಿಡಿಯಲು ತಡವಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.







