ಕೆಂಪಣ್ಣ ವಿರುದ್ಧ ಸಂಪುಟದಲ್ಲಿ ಚರ್ಚೆ, ದಾಖಲೆಗಳಿದ್ದರೆ ಲೋಕಾಯುಕ್ತಕ್ಕೆ ದೂರು ನೀಡಲಿ: ಜೆ.ಸಿ.ಮಾಧುಸ್ವಾಮಿ
ಶೇ.40ರಷ್ಟು ಕಮಿಷನ್ ಆರೋಪ

ಕೆಂಪಣ್ಣ- ಗುತ್ತಿಗೆದಾರರ ಸಂಘದ ಅಧ್ಯಕ್ಷರು
ಬೆಂಗಳೂರು, ಆ. 25: ‘ರಾಜ್ಯ ಸರಕಾರದ ವಿರುದ್ಧ ಶೇ.40ರಷ್ಟು ಕಮಿಷನ್ ಆರೋಪ ಮಾಡಿರುವ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ವಿರುದ್ಧ ಸಂಪುಟ ಸಭೆಯಲ್ಲಿ ಅನೌಪಚಾರಿಕವಾಗಿ ಚರ್ಚಿಸಿದ್ದು, ಅವರ ಬಳಿ ಸೂಕ್ತ ದಾಖಲೆಗಳಿದ್ದರೆ ಲೋಕಾಯುಕ್ತಕ್ಕೆ ದೂರು ನೀಡಲಿ. ಅದು ಬಿಟ್ಟು ಅನಗತ್ಯ ತೇಜೋವಧೆ ಮಾಡುವುದು ಸರಿಯಲ್ಲ' ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಆಕ್ಷೇಪಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳ ಶಾಸಕರೂ ಶೇ.10ರಿಂದ ಶೇ.15ರಷ್ಟು ಕಮಿಷನ್ ಕೇಳುತ್ತಿದ್ದಾರೆಂದು ಕೆಂಪಣ್ಣ ಆರೋಪ ಮಾಡುವ ಮೂಲಕ ಅವಹೇಳನ ಮಾಡುವುದು ಯಾರಿಗೂ ಗೌರವ ತರುವುದಿಲ್ಲ. 224 ಮಂದಿ ಶಾಸಕರು ಭ್ರಷ್ಟರು ಎಂದು ಹೇಳುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.
‘ಕೆಂಪಣ್ಣ ಯಾರು? ಅವರ ಎಲ್ಲಿ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದಾರೆಂಬ ಮಾಹಿತಿಯೇ ಇಲ್ಲ? ಕೆಂಪಣ್ಣ ಗುತ್ತಿಗೆದಾರನೇ ಅಲ್ಲ. ಭ್ರಷ್ಟಾಚಾರ ಆರೋಪ ಮಾಡಿದರೆ ಅದಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸಬೇಕು. ಅದು ಬಿಟ್ಟು ಮನಸೋ ಇಚ್ಛೆ ಆರೋಪ ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ. ಇಂತಹ ಗೊತ್ತು ಗುರಿ ಇಲ್ಲದೇ ಆರೋಪಗಳ ಕುರಿತು ತನಿಖೆ ನಡೆಸಲು ಸಾಧ್ಯವೇ?' ಎಂದು ಮಾಧುಸ್ವಾಮಿ ವಾಗ್ದಾಳಿ ನಡೆಸಿದರು.
‘ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೆಲವೊಮ್ಮೆ ಹೇಳಿಕೆ ನೀಡುತ್ತಾರೆ. ಹೀಗಾಗಿ ಅವರಿಗೆ ನಾವು ಉತ್ತರ ನೀಡುವುದು ಅಸಾಧ್ಯ. ಕೆಂಪಣ್ಣ ಮಾಡಿದ ಆರೋಪಕ್ಕೆ ನ್ಯಾಯಾಂಗ ತನಿಖೆ ಸಾಧ್ಯವೇ ಇಲ್ಲ. ಅವರ ಬಳಿ ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆಗಳಿದ್ದರೆ ಲೋಕಾಯುಕ್ತಕ್ಕೆ ದೂರು ನೀಡಲಿ. ಲೋಕಾಯುಕ್ತ ಸಂಸ್ಥೆ ಸೂಕ್ತ ರೀತಿಯಲ್ಲಿ ತನಿಖೆ ನಡೆಸಲಿದೆ' ಎಂದು ಮಾಧುಸ್ವಾಮಿ ಸ್ಪಷ್ಟಪಡಿಸಿದರು.
ಮೇಲ್ಮನವಿ ಸಲ್ಲಿಸುವುದಿಲ್ಲ: ‘ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ರದ್ದು ಮಾಡುವಂತೆ ಹೈಕೋರ್ಟ್ ಆದೇಶದ ವಿರುದ್ಧ ಯಾವುದೇ ಕಾರಣಕ್ಕೂ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸದಿರಲು ಸರಕಾರ ತೀರ್ಮಾನಿಸಿದೆ. ಸಂಪುಟ ಸಭೆಯಲ್ಲಿ ಈ ವಿಚಾರ ಚರ್ಚೆ ನಡೆಸಿದ್ದು, ಬಿಜೆಪಿ ಪ್ರಣಾಳಿಕೆಯಲ್ಲಿ ಆಶ್ವಾಸನೆ ನೀಡಿದಂತೆ ಲೋಕಾಯುಕ್ತ ಸಂಸ್ಥೆ ಬಲಪಡಿಸಲು ಹಂತ-ಹಂತವಾಗಿ ಕ್ರಮ ವಹಿಸಲಾಗುವುದು' ಎಂದು ಮಾಧುಸ್ವಾಮಿ ತಿಳಿಸಿದರು.
‘ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಸರಕಾರ ಎಲ್ಲ ರೀತಿಯ ಕ್ರಮ ಕೈಗೊಳ್ಳಲಿದೆ. ಈ ಸಂಬಂಧ ಈಗಾಗಲೇ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಪ್ರಧಾನ ಕಾರ್ಯದರ್ಶಿ ಜತೆ ಸಮಾಲೋಚನೆ ನಡೆಸಿದ್ದು, ಆ ಸಂಸ್ಥೆಗೆ ಸಿಬ್ಬಂದಿ ಸೇರಿದಂತೆ ಅಗತ್ಯ ಸೌಕರ್ಯ ನೀಡಲು ಕ್ರಮ ವಹಿಸಲಾಗುವುದು' ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.







