ಉಪ್ಪಿನಂಗಡಿ: ರಸ್ತೆ ಅಪಘಾತ; ವಾಹನದಡಿ ಸಿಲುಕಿದ್ದ ಮಹಿಳೆಯ ರಕ್ಷಣೆ

ಉಪ್ಪಿನಂಗಡಿ: ಟಿಪ್ಪರ್ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಟಿಪ್ಪರ್ ನಡಿ ಸಿಲುಕಿದ್ದ ದ್ವಿಚಕ್ರ ವಾಹನ ಸವಾರೆಯನ್ನು ಸುಮಾರು ಎರಡು ಗಂಟೆಗಳ ಕಾಲ ಶ್ರಮವಹಿಸಿ ಕ್ರೇನ್, ಹಿಟಾಚಿ ಬಳಸಿ ರಕ್ಷಿಸಿದ ಘಟನೆ ಗೋಳಿತ್ತೊಟ್ಟು ಗ್ರಾಮದ ಕಾಂಚನ- ಶಾಂತಿನಗರ ರಸ್ತೆಯ ನೂಜೋಲು ಎಂಬಲ್ಲಿ ಗುರುವಾರ ನಡೆದಿದ್ದು, ಅದೃಷ್ಟವಶಾತ್ ಇವರು ಸಣ್ಣಪುಟ್ಟ ಗಾಯಗೊಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ನೂಜೋಲು ನಿವಾಸಿ ಕುಶಾಲಪ್ಪ ಎನ್ನುವವರು ದ್ವಿಚಕ್ರ ವಾಹನದಲ್ಲಿ ತನ್ನ ತಾಯಿ ಪ್ರೇಮರೊಂದಿಗೆ ಉಪ್ಪಿನಂಗಡಿಗೆ ಹೋದವರು ವಾಪಸ್ ಬರುತ್ತಿದ್ದ ಸಂದರ್ಭ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಬಂದ ಮರಳು ಸಾಗಾಟದ ಟಿಪ್ಪರ್ ಲಾರಿ ಇವರ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆಯಿತೆನ್ನಲಾಗಿದೆ. ಢಿಕ್ಕಿಯ ರಭಸಕ್ಕೆ ಲಾರಿಯು ದ್ವಿಚಕ್ರ ವಾಹನ ಸವಾರರ ಸಮೇತ ರಸ್ತೆ ಬದಿಯ ಚರಂಡಿಗೆ ಇಳಿದಿದ್ದು, ಈ ವೇಳೆ ಪ್ರೇಮ ಅವರ ಕಾಲು ದ್ವಿಚಕ್ರ ವಾಹನದಡಿಯಲ್ಲಿ ಸಿಲುಕಿದ್ದರಿಂದ ಅವರ ರಕ್ಷಣೆ ತಕ್ಷಣಕ್ಕೆ ಸಾಧ್ಯವಾಗಲಿಲ್ಲ. ಬಳಿಕ ಸ್ಥಳಕ್ಕೆ ಕ್ರೇನ್, ಹಿಟಾಚಿ, ಸಹಾಯದಿಂದ ಸುಮಾರು ಎರಡು ಗಂಟೆಗಳಷ್ಟು ಕಾಲ ಕಾರ್ಯಾಚರಣೆ ನಡೆಸಿ ಅವರನ್ನು ರಕ್ಷಿಸಲಾಯಿತು.
ದ್ವಿಚಕ್ರ ಸವಾರರಾದ ತಾಯಿ, ಮಗ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.