‘ಮನೆ ಮನೆಗೆ ನಲ್ಲಿ ಯೋಜನೆ’ ಕೆಲಸ ನಮ್ಮದು ಕ್ರೆಡಿಟ್ಟು ನಿಮ್ಮದು ಹೇಗೆ?: ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಪ್ರಶ್ನೆ

ಬೆಂಗಳೂರು, ಆ.25: ‘ಮನೆ ಮನೆಗೆ ನಲ್ಲಿ ಯೋಜನೆ’ ಕೆಲಸ ನಮ್ಮದು ಕ್ರೆಡಿಟ್ಟು ನಿಮ್ಮದು ಹೇಗೆ? ಎಂದು ಪ್ರಧಾನಿ ನರೇಂದ್ರ ಮೋದಿಯನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
2018ರಲ್ಲಿ ಲೋಕಸಭಾ ಚುನಾವಣೆಗೆ ಮೊದಲು ತಾವು ಏನು ಹೇಳಿದ್ದೀರಿ ಎಂಬುದನ್ನು ಒಮ್ಮೆ ನೆನಪಿಸಿಕೊಳ್ಳಿ. 2022ರ ಒಳಗೆ ಮನೆಯಿಲ್ಲದವರಿಗೆ ಮನೆ. ಪ್ರತಿ ಮನೆಗೆ ನಲ್ಲಿ, ನಲ್ಲಿಯಲ್ಲಿ ನೀರು, ಪ್ರತಿ ಮನೆಗೆ ಗ್ಯಾಸ್ ಕನೆಕ್ಷನ್ ಹೀಗೆ ಪುಂಖಾನುಪುಂಖವಾಗಿ ಭಾಷಣ ಮಾಡಿದ್ದಿರಿ. ಇದನ್ನು ಆಧರಿಸಿ ‘ಜಲ ಜೀವನ್ ಮಿಷನ್’ ಎಂದು ಹಳೆಯ ಯೋಜನೆಗಳ ಹೆಸರು ಬದಲಾಯಿಸಿ ಜನ ಸುಲಿಗೆ ಮಿಷನ್ ಮಾಡಿದಿರಿ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
1972 ಮತ್ತು 2009ರಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರಗಳು ಜಾರಿಗೆ ತಂದ ನೀರು ಸರಬರಾಜು ಯೋಜನೆಗಳ ಹೆಸರುಗಳನ್ನು ಬದಲಾಯಿಸಿ ‘ಜಲಜೀವನ್ ಮಿಷನ್ ಯೋಜನೆ’ ಎಂದು ಹೆಸರು ಬದಲಾಯಿಸಿದಿರಿ ಅಡ್ಡಿ ಇಲ್ಲ. ದೇಶದಲ್ಲಿ 10 ಕೋಟಿ ಮನೆಗಳಿಗೆ ನಲ್ಲಿ ಸಂಪರ್ಕಗಳನ್ನು ಕಲ್ಪಿಸಿದ್ದೇವೆಂದು ಇತ್ತೀಚೆಗೆ ತಾವು ಹೇಳಿದ್ದೀರಿ. ಆದರೆ ವಾಸ್ತವವೇನು ಎಂದು ತಮಗೆ ಗೊತ್ತಿದೆಯೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ರಾಜ್ಯ ಸರಕಾರ ನನಗೆ ಒದಗಿಸಿರುವ ಮಾಹಿತಿ ಪ್ರಕಾರ 2013-14ರಿಂದ 2017-18 ರವರೆಗೆ ನಮ್ಮ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ 7,107 ಓವರ್ ಹೆಡ್ ಟ್ಯಾಂಕುಗಳನ್ನು ಗ್ರಾಮೀಣ ಪ್ರದೇಶಗಳೊಂದರಲ್ಲೆ ನಿರ್ಮಾಣ ಮಾಡಿದ್ದೆವು. 10,812 ನೀರಿನ ಶುದ್ಧೀಕರಣ ಸ್ಥಾವರಗಳನ್ನು ನಿರ್ಮಿಸಿದ್ದೆವು. ಇಷ್ಟು ದೊಡ್ಡ ಮೂಲಭೂತ ವ್ಯವಸ್ಥೆಯನ್ನು ನಿರ್ಮಿಸಿದ ನಾವು ಜನರಿಗೆ ಬಲವಂತ ಮಾಡಿ ನಲ್ಲಿ ಸಂಪರ್ಕಗಳನ್ನು ಮತ್ತು ಮನೆಗಳಿಗೆ ಮಿಟರ್‍ಗಳನ್ನು ಅಳವಡಿಸಿರಲಿಲ್ಲ ಎಂದು ಅವರು ಹೇಳಿದ್ದಾರೆ.
ನಮ್ಮ ಸರಕಾರದ ಅವಧಿಯಲ್ಲಿ ಕೇವಲ 79 ಸಾವಿರ ಮೀಟರ್ ಗಳನ್ನು ಮತ್ತು 5.4 ಲಕ್ಷ ನಲ್ಲಿ ಸಂಪರ್ಕಗಳನ್ನು ಕೊಟ್ಟಿದ್ದೆವು. ಮೀಟರ್‍ಗಳನ್ನು ಅಳವಡಿಸಿ ತೆರಿಗೆಯನ್ನು ಲೂಟಿ ಮಾಡುವ ಮಟ್ಟಕ್ಕೆ ಇಳಿದಿರಲಿಲ್ಲ. ನಿಮ್ಮ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಕೇವಲ 5,430 ಓವರ್ ಹೆಡ್ ಟ್ಯಾಂಕುಗಳನ್ನು, ಕೇವಲ 1,401 ನೀರಿನ ಶುದ್ಧೀಕರಣ ಸ್ಥಾವರಗಳನ್ನು ನಿರ್ಮಿಸಲಾಗಿದೆ. ಆದರೆ, 21 ಲಕ್ಷ ಮನೆಗೆ ಮೀಟರ್‍ಗಳನ್ನು ಮತ್ತು 23 ಲಕ್ಷ ಮನೆಗಳಿಗೆ ನಲ್ಲಿಗಳನ್ನು ಅಳವಡಿಸಿದ್ದೇವೆಂದು ಹೇಳಿ ಸುಲಿಗೆ ಆರಂಭಿಸಿದೆ ಎಂದು ಅವರು ತಿಳಿಸಿದ್ದಾರೆ.
ಬಹಳ ದೊಡ್ಡ ಸಾಧನೆ ಮಾಡಿದ್ದೇವೆಂದು ಬಿಜೆಪಿಯವರು ಜಾಹೀರಾತು ಕೊಡುತ್ತಿದ್ದಾರಲ್ಲ ಎಂದು ಕೆಲವು ಗ್ರಾಮಗಳನ್ನು ಪರಿಶೀಲಿಸಿ ನೋಡಿದರೆ ನಮ್ಮ ಸರಕಾರದ ಅವಧಿಯಲ್ಲಿ ನಾವು ನಿರ್ಮಿಸಿದ್ದ ಓವರ್‍ಹೆಡ್ ಟ್ಯಾಂಕುಗಳು, ನೀರು ಶುದ್ಧೀಕರಣ ಸ್ಥಾವರಗಳು, ಕಲ್ಪಿಸಿಕೊಟ್ಟಿದ್ದ ನಲ್ಲಿ ಸಂಪರ್ಕಗಳನ್ನು ಈ ಬಿಜಿಪಿ ಸರಕಾರ ಜನರಿಂದ ಬೇಕಾಬಿಟ್ಟಿ ಶುಲ್ಕ ವಸೂಲಿ ಮಾಡಿದ್ದಲ್ಲದೆ ಹೊಸದಾಗಿ ಸಂಪರ್ಕ ಕಲ್ಪಿಸಿದ್ದೇವೆಂದು ಹೇಳಿ ಕೇಂದ್ರ ಸರಕಾರಕ್ಕೆ ಸುಳ್ಳು ಲೆಕ್ಕ ಕೊಟ್ಟಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ನೀವು ಅದನ್ನೆಲ್ಲ ಸೇರಿಸಿ 10 ಕೋಟಿ ನಲ್ಲಿ ಸಂಪರ್ಕ ಕೊಟ್ಟಿದ್ದೇವೆಂದು ಸುಳ್ಳನ್ನು ವಿಸ್ತರಿಸಿದ್ದೀರಿ. ನನ್ನ ಬಳಿ ಗ್ರಾಮೀಣ ಪ್ರದೇಶದ ಮಾಹಿತಿ ಇದೆ. ನಗರ, ಪಟ್ಟಣ ಪ್ರದೇಶಗಳದ್ದೂ ಇದೇ ಕತೆ ಇರಬೇಕು. ಹೀಗಾಗಿ ಪ್ರಧಾನಮಂತ್ರಿಗಳೆ ಯಾರದೋ ಶ್ರಮವನ್ನು ತಮ್ಮ ಶ್ರಮ ಎಂದು ಹೇಳಿಕೊಳ್ಳುವ ಕೆಟ್ಟಚಾಳಿಯನ್ನು ಬಿಟ್ಟು ಸ್ವಂತ ಶ್ರಮ ಎಷ್ಟು ಎಂದು ಜನರಿಗೆ ತಿಳಿಸಿ ಎಂದು ಅವರು ಆಗ್ರಹಿಸಿದ್ದಾರೆ.
ಇಲ್ಲದಿದ್ದರೆ ನಗೆಪಾಟಲಿಗೆ ಈಡಾಗುತ್ತೀರಿ. ಬೇರೊಬ್ಬರ ಶ್ರಮದಿಂದ ಪದವಿ ಪ್ರಮಾಣ ಪತ್ರ ಪಡೆದರೂ ಇತಿಹಾಸ ನಕಲಿಯನ್ನು ಅಸಲಿ ಎಂದು ಎಂದೂ ಹೇಳುವುದಿಲ್ಲ. ಇತಿಹಾಸ ಅತ್ಯಂತ ನಿಷ್ಠುರವಾಗಿರುತ್ತದೆ, ಕ್ರೂರವಾಗಿರುತ್ತದೆ. ಗೃಹಿಣಿಯಾದ ಹೆಣ್ಣು ಮಗಳೊಬ್ಬಳು ಕಿಂದರಿಜೋಗಿಯ ಹಾಡಿಗೆ ಮರುಳಾಗಿ ಗಂಡ ಮಕ್ಕಳನ್ನು ಬಿಟ್ಟು ಅವನ ಹಿಂದೆ ಹೋಗುತ್ತಾಳೆ. ಸ್ವಲ್ಪ ಕಾಲದಲ್ಲೆ ಅವನ ಸುಳ್ಳುಗಳು ಅರ್ಥವಾಗಿ ಹತಾಶಳಾಗುತ್ತಾಳೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಭಾರತದ ಜನರೂ ಸಹ ನಿಮ್ಮ ಕಿಂದರಿ ಜೋಗಿಯಂಥ ಕನಸುಗಳನ್ನು ಕೇಳಿ ‘ಎಲ್ಲೋ ಜೋಗಪ್ಪ ನಿನ್ನರಮಾನೆ’ ಎಂದು ನಿಮ್ಮ ಹಿಂದೆ ಬಂದರು. ಈಗ ಹತಾಶರಾಗಿದ್ದಾರೆ. ಮೋದಿಯವರೆ, ಸುಳ್ಳುಗಳನ್ನು ಕೇಳಿ ಕೇಳಿ ನಿಮ್ಮ ಜೊತೆಗಿದ್ದ ಶೀಲಲಕ್ಷ್ಮಿ ನಿಮ್ಮಿಂದ ದೂರವಾಗಿದ್ದಾಳೆ. ಶೀಲಲಕ್ಷ್ಮಿಯನ್ನು ಕಳೆದುಕೊಂಡ ಮನುಷ್ಯರು ಚರಿತ್ರೆಯಲ್ಲಿ ಬರೀ ಬುರ್ನಾಸುಗಳಾಗುತ್ತಾರೆ ಎಂದು ಅವರು ಎಚ್ಚರಿಸಿದ್ದಾರೆ.
ರಾಜ್ಯದ ನಿರುಪಯೋಗಿ ಸಂಸದರಿಗೆ ಒಂದಿಷ್ಟು ಮಾತನಾಡಲು ಧೈರ್ಯ ನೀಡಿ, ಸಮಸ್ಯೆ ಕೇಳಿ ರಾಜ್ಯದ ಕಷ್ಟ ಏನೆಂದು ತಿಳಿಯುತ್ತದೆ ಎಂದು ಸಿದ್ದರಾಮಯ್ಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಂಗಳೂರಿಗೆ ಬರುವವರಿದ್ದೀರಿ ಬನ್ನಿ. ದಯಮಾಡಿ ಸುಳ್ಳು ಹೇಳಬೇಡಿ. ನಿಜ ಏನೆಂದು ಹೇಳಿ ಹೋಗಿ. ನಿಮಗೆ ಹಲವು ಮನವಿಗಳನ್ನು, ಒತ್ತಾಯಗಳನ್ನು ಮಾಡುವುದಿದೆ ಅದರ ಮೊದಲ ಒತ್ತಾಯ ಇದು.
-ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ







