ರಾಜಕೀಯ ಬಿಡುತ್ತೇನೆಯೇ ಹೊರತು ಕಾಂಗ್ರೆಸ್‍ಗೆ ಹೋಗಲ್ಲ: ಸಚಿವ ಜೆ.ಸಿ.ಮಾಧುಸ್ವಾಮಿ

ಬೆಂಗಳೂರು: 'ಮಾಧುಸ್ವಾಮಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಲಿದ್ದಾರೆ' ಎಂಬ ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೇಳಿಕೆಗೆ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ವಿಧಾನಸೌಧಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಬಿಜೆಪಿ ಸರಕಾರದಲ್ಲಿ ಸಚಿವನಾಗಿರುವ ತನಗೆ ರಾಜಣ್ಣನವರ ಮೂಲಕ ಟಿಕೆಟ್ ಪಡೆದು ಚುನಾವಣೆಗೆ ಸ್ಪರ್ಧಿಸಬೇಕಾದ ಅನಿವಾರ್ಯ ಸ್ಥಿತಿ ಎದುರಾದರೆ ರಾಜಕೀಯ ಬಿಡುತ್ತೇನೆಯೇ ಹೊರತು ಅಂತಹ ದೈನೇಸಿ ಸ್ಥಿತಿಗೆ ನಾನು ಯಾವುದೇ ಕಾರಣಕ್ಕೂ ಹೋಗುವುದಿಲ್ಲ. ತುಮಕೂರು ಡಿಸಿಸಿ ಬ್ಯಾಂಕ್‍ನಲ್ಲಿ ನಡೆದಿರುವ ಎಲ್ಲ ಅವ್ಯವಹಾರಗಳ ಬಗ್ಗೆ ಶೀಘ್ರದಲ್ಲೇ ದಾಖಲೆಗಳ ಜತೆ ಮಾಧ್ಯಮಗಳ ಮುಂದೆ ಬರಲಿದ್ದೇನೆ' ಎಂದು ತಿಳಿಸಿದರು.
‘ಕರ್ನಾಟಕ ಭೂ ಕಬಳಿಕೆ (ನಿಷೇಧ) ಕಾಯಿದೆ 2011ರ ಕಲಂ 2(ಡಿ)ಗೆ ತಿದ್ದುಪಡಿ ತರಲು ನಿರ್ಧಾರ ಮಾಡಿದ್ದು, ಬಹುದಿನಗಳ ಜನತೆಯ ಬೇಡಿಕೆಗೆ, ಸ್ಪಂದಿಸಿದಂತಾಗಿದೆ. ಗ್ರಾಮೀಣ ಪ್ರದೇಶವನ್ನು ಹೊರತುಪಡಿಸಿ ನಗರ ಪ್ರದೇಶಕ್ಕೆ ಸೀಮಿತವಾದ ಪ್ರಕರಣಗಳನ್ನು ಮಾತ್ರ ಭೂ ಕಬಳಿಕೆ ಪ್ರಕರಣಗಳನ್ನು ವಿಶೇಷ ನ್ಯಾಯಾಲಯ ವ್ಯಾಪ್ತಿಗೆ ಸೇರಿಸಲಾಗಿದೆ' ಎಂದು ಅವರು ವಿವರ ನೀಡಿದರು.





