ಟ್ವಿಟರ್ ಖಾತೆ ನಿರ್ಬಂಧ: ಆಕ್ಷೇಪಣೆ ಸಲ್ಲಿಕೆಗೆ ಕಾಲಾವಕಾಶ ಕೋರಿದ ಕೇಂದ್ರ, ವಿಚಾರಣೆ ಮುಂದೂಡಿದ ಹೈಕೋರ್ಟ್

ಬೆಂಗಳೂರು, ಆ.25: ಮಾಹಿತಿ ತಂತ್ರಜ್ಞಾನ(ಐಟಿ) ಕಾಯ್ದೆ-2000ದ ಕಲಂ 69ಎ ಗೆ ವಿರುದ್ಧವಾಗಿರುವ 1,400ಕ್ಕೂ ಹೆಚ್ಚು ಟ್ವಿಟರ್ ಖಾತೆಗಳನ್ನು ಬ್ಲಾಕ್ ಮಾಡಬೇಕು ಎಂಬ ನೋಟಿಸ್‍ಗಳನ್ನು ಪ್ರಶ್ನಿಸಿ ಟ್ವಿಟರ್ (Twitter) ಕಂಪೆನಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಹೈಕೋರ್ಟ್ ವಿಚಾರಣೆಯನ್ನು ಸೆ.8ಕ್ಕೆ ಮುಂದೂಡಿದೆ.
ಟ್ವಿಟರ್ ಕಂಪೆನಿಯ ಬೆಂಗಳೂರಿನ ಪ್ರತಿನಿಧಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಗುರುವಾರ ವಿಚಾರಣೆ ನಡೆಸಿತು.
ಕೇಂದ್ರ ಸರಕಾರದ ಪರ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಇದೇ 27 ಅಥವಾ 28ರಂದು ನ್ಯಾಯಪೀಠಕ್ಕೆ ಆಕ್ಷೇಪಣೆ ಸಲ್ಲಿಸಲಾಗುವುದು ಎಂದು ಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು, ಮುಂದಿನ ಎರಡ್ಮೂರು ದಿನಗಳಲ್ಲಿ ಸಾಲಿಸಿಟರ್ ಜನರಲ್ ಅವರು ಆಕ್ಷೇಪಣೆ ಸಲ್ಲಿಸುತ್ತಾರೆ. ಅರ್ಜಿದಾರರೂ ಒಂದು ವಾರದಲ್ಲಿ ಪ್ರತ್ಯುತ್ತರ ದಾಖಲಿಸಬಹುದಾಗಿದೆ ಎಂದು ನ್ಯಾಯಪೀಠವು ತಿಳಿಸಿತು. ಅರ್ಜಿ ವಿಚಾರಣೆಯನ್ನು ಸೆ.8ಕ್ಕೆ ಮುಂದೂಡಿತು.







