ಗುಜರಾತ್ ಸರಕಾರದ ವಿರುದ್ಧ ಬಿಜೆಪಿಯ ಹಿರಿಯ ನಾಯಕ, ಮಾಜಿ ಸಿಎಂ ಶಾಂತಕುಮಾರ್ ಆಕ್ರೋಶ
"ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳ ಬಿಡುಗಡೆಯಿಂದಾಗಿ ನಾನು ತಲೆತಗ್ಗಿಸಬೇಕಾಗಿದೆ"

ಹೊಸದಿಲ್ಲಿ,ಆ.25: ಬಿಲ್ಕಿಸ್ ಬಾನು ಪ್ರಕರಣದ 11 ಮಂದಿ ಅಪರಾಧಿಗಳನ್ನು ಗುಜರಾತ್ ಸರಕಾರ ಬಿಡುಗಡೆಗೊಳಿಸಿರುವುದನ್ನು ಬಿಜೆಪಿಯ ಹಿರಿಯ ನಾಯಕ ಹಾಗೂ ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಶಾಂತಕುಮಾರ್ ಗುರುವಾರ ಖಂಡಿಸಿದ್ದಾರೆ.
‘‘ಈ ಅಪರಾಧಿಗಳ ಬಿಡುಗಡೆಯ ಸುದ್ದಿಯನ್ನು ಕೇಳಿದ ಬಳಿಕ ನಾನು ನಾಚಿಕೆಯಿಂದ ತಲೆತಗ್ಗಿಸಿದ್ದೇನೆ. ಅದು ಇತಿಹಾಸದ ಅತ್ಯಂತ ಬರ್ಬರ ಪ್ರಕರಣಗಳಲ್ಲೊಂದಾಗಿದೆ. ಇಂತಹ ಅಪರಾಧವನ್ನು ಎಸಗಿದವರ ಜೈಲು ಶಿಕ್ಷೆಯನ್ನು ರದ್ದುಪಡಿಸಲು ಗುಜರಾತ್ ಸರಕಾರವು ಹೇಗೆ ಅವಕಾಶ ನೀಡಿತು ಎಂದು ಶಾಂತಕುಮಾರ್ ಪ್ರಶ್ನಿಸಿದ್ದಾರೆ. ಗುಜರಾತ್ ಸರಕಾರವು ತನ್ನ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕು ಹಾಗೂ ಈ ಪ್ರಕರಣದಲ್ಲಿ ದೋಷಿಗಳನ್ನು ಗಲ್ಲಿಗೇರಿಸಬೇಕು ಎಂದು ವಾಜಪೇಯಿ ನೇತೃತ್ವದ ಸರಕಾರದಲ್ಲಿ ಕೇಂದ್ರ ಸಚಿವರೂ ಆಗಿದ್ದ ಶಾಂತಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಬಾಗಲಕೋಟೆ; ಪುರಸಭೆ ಅಧ್ಯಕ್ಷರ ಪದಗ್ರಹಣ ವೇಳೆ ಕುರಾನ್ ಪಠಿಸಿದ ಆರೋಪ: ಸಭಾಂಗಣಕ್ಕೆ ಗೋಮೂತ್ರ ಸಿಂಪಡಿಸಿದ BJP ಸದಸ್ಯರು
ಈ ಅಪರಾಧಿಗಳ ಜೈಲು ಶಿಕ್ಷೆ ರದ್ದತಿಯನ್ನು ಹಿಂಪಡೆಯುವಂತೆ ಮಾಡಲು, ತಾನು ಪ್ರಧಾನಿ ನರೇಂದ್ರ ಮೋದಿಯವರನ್ನು ಸಂಪರ್ಕಿಸುವುದಾಗಿಯೂ ಶಾಂತಕುಮಾರ್ ತಿಳಿಸಿದರು. ಭಾರತವು ಸ್ವಾತಂತ್ರ 75ನೇ ಅಮೃತ ಮಹೋತ್ಸವವನ್ನು ಆಚರಿಸುವ ಸಂದರ್ಭದಲ್ಲೇ ಈ 11 ಮಂದಿ ಅಪರಾಧಿಗಳನ್ನು ಬಿಡುಗಡೆಗೊಳಿಸಿರುವುದು ನಾಚಿಕೆಗೇಡು ಎಂದು ಶಾಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
‘‘ಅತ್ಯಾಚಾರ ಹಾಗೂ ಕೊಲೆ ಕೃತ್ಯಗಳಿಗಾಗಿ ಈ 1 1 ಮಂದಿಯನ್ನು ವಿಶೇಷ ನ್ಯಾಯಾಲಯವು ಅಪರಾಧಿಗಳೆಂದು ಘೋಷಿಸಿದ್ದನ್ನು ಹೈಕೋರ್ಟ್ ಸಮರ್ಥಿಸಿದೆ. ಅವರು ಅತ್ಯಂತ ಹೇಯ ಅಪರಾಧಗಳನ್ನು ಎಸಗಿದ್ದಾರೆಂಬುದನ್ನು ಇದು ಸಾಬೀತುಪಡಿಸಿದೆ’’ ಎಂದು ಶಾಂತಕುಮಾರ್ ತಿಳಿಸಿದರು.
‘‘ ಅತ್ಯಂತ ಹೇಯ ಅಪರಾಧಗಳನ್ನು ಎಸಗಿದ ಹೊರತಾಗಿಯೂ ಅವರನ್ನು ಗಲ್ಲಿಗೇರಿಸದಿರುವುದು ನನಗೆ ಅಚ್ಚರಿಯುಂಟು ಮಾಡಿದೆ. ಇದೀಗ, ಗುಜರಾತ್ ಸರಕಾರವು ವಿಶೇಷ ಕಾನೂನೊಂದನ್ನು ಬಳಿಸಿಕೊಂಡು ಅವರನ್ನು ಬಿಡುಗಡೆಗೊಳಿಸಿರುವುದು ನನಗೆ ಇನ್ನೂ ಹೆಚ್ಚಿನ ಅಶ್ಚರ್ಯವುಂಟು ಮಾಡಿದೆ. ಮಹಿಳೆಯರು ಹಾಗೂ ಬಾಲಕಿಯರ ಮೇಲಿನ ಅಪರಾಧಗಳು ಹೆಚ್ಚುತ್ತಿವೆ’’ ಎಂದವರು ಹೇಳಿದರು.







