ತೇಜಸ್ವಿ ಯಾದವ್ ಕುರುಬ ಸಮುದಾಯಕ್ಕೆ ಸೇರಿದವರು, ನಿತ್ಯಾನಂದ ರೈ ಶ್ರೀಕೃಷ್ಣನ ವಂಶದವರು: ಬಿಜೆಪಿ

Photo:PTI
ಪಾಟ್ನಾ: ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ (Tejashwi Yadav)ಅವರು ಕುರುಬ ಸಮುದಾಯಕ್ಕೆ ಸೇರಿದವರು, ಆದರೆ ಅವರು ತಾವು ಶ್ರೀಕೃಷ್ಣನ ವಂಶದವರೆಂದು ಹೇಳಿಕೊಳ್ಳುತ್ತಿರುವುದು ‘ನಕಲಿ’ ಎಂದು ಬಿಜೆಪಿ ಆರೋಪಿಸಿದೆ.
ರಾಜ್ಯ ಬಿಜೆಪಿ ವಕ್ತಾರ ಹಾಗೂ ಇತರೆ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಿಖಿಲ್ ಆನಂದ್ ಅವರು ತೇಜಸ್ವಿ ಯಾದವ್ ನಡೆಸಿದ ಪತ್ರಿಕಾಗೋಷ್ಠಿಗೆ ಪ್ರತಿಕ್ರಿಯಿಸಿ ಅವರ ವಿರುದ್ಧ ಈ ಹೇಳಿಕೆ ನೀಡಿದ್ದಾರೆ.
ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿರುವ ಹಾಗೂ ಬಿಹಾರದಲ್ಲಿ ಗೇಮ್ ('ಖೇಲಾ') ಮಾಡಲು ಯೋಜಿಸುತ್ತಿರುವ ಕೇಂದ್ರ ಸಚಿವ ನಿತ್ಯಾನಂದ ರೈ (Nityanand Rai )ವಿರುದ್ಧ ಪತ್ರಿಕಾಗೋಷ್ಠಿಯಲ್ಲಿ ತೇಜಸ್ವಿ ಯಾದವ್ ವಾಗ್ದಾಳಿ ನಡೆಸಿದರು.
"ನಿತ್ಯಾನಂದ ರೈ (ಕೇಂದ್ರದ ಗೃಹ ಖಾತೆ ರಾಜ್ಯ ಸಚಿವ) ಅವರು ನಿಜವಾದ ಯಾದವ. ಅವರು ಗೋಪಾಲಕರ ಕುಟುಂಬಕ್ಕೆ ಸೇರಿದವರು. ಆದ್ದರಿಂದ ಅವರು ಶ್ರೀಕೃಷ್ಣನ ವಂಶಸ್ಥರು. ತೇಜಸ್ವಿ 'ಫರ್ಜಿ' (ನಕಲಿ)ಯಾದವ. ಅವರು ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದಾರೆ’’ ಎಂದು ನಿಖಿಲ್ ಆನಂದ್ ನಿಂದಿಸಿದರು.
ಬಿಜೆಪಿ ಬಿಹಾರದಲ್ಲಿ ಅಧಿಕಾರ ಹಿಡಿಯಲು ಯಾದವ ಸಮುದಾಯವನ್ನು ಗೆಲ್ಲುವ ಪ್ರಯತ್ನದಲ್ಲಿದೆ. ಹೀಗಾಗಿ ನಿತ್ಯಾನಂದ ರೈ ಅವರನ್ನು ಮುಖ್ಯಮಂತ್ರಿಯಾಗಿ ಬೆಂಬಲಿಸಬಹುದು, ರಾಜ್ಯದಲ್ಲಿ ಭಾರೀ ಸಂಖ್ಯೆಯಲ್ಲಿರುವ ಯಾದವರು ಈ ತನಕ ಆರ್ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ಗೆ ದೊಡ್ಡ ಪ್ರಮಾಣದಲ್ಲಿ ಬೆಂಬಲವಾಗಿ ನಿಂತಿದ್ದಾರೆ.







