ನಾಯಿಯ ನಿಯತ್ತಿಗೆ ಬೆಲೆ ಸಿಗಬಹುದೇ?
ಇಂದು ವಿಶ್ವ ಶ್ವಾನಗಳ ದಿನ

ಆಗಸ್ಟ್ 26, ಅಂತರ್‌ರಾಷ್ಟ್ರೀಯ ಶ್ವಾನ ದಿನ, ನಾಯಿಗಳು ಮನುಷ್ಯಕುಲಕ್ಕೆ ಜೊತೆಯಾದದ್ದನ್ನು, ನಮ್ಮ ಸಂತಸದಲ್ಲಿ ಭಾಗಿಯಾದದ್ದನ್ನು ಸ್ಮರಿಸಬೇಕಾದ ದಿನ. ಮನುಷ್ಯನ ಆತ್ಮೀಯ ಸ್ನೇಹಿತನಾಗಿ ಜೊತೆಯಾದ ನಾಯಿ, ಬೀದಿನಾಯಿಯಾಗಿ ಬೊಗಳುತ್ತಿರುವುದಾದರು ಏಕೆ ಎಂದು ಆಲೋಚಿಸಬೇಕಾದ ಅನಿವಾರ್ಯತೆ ಇಂದಿನದು. ಆಶ್ರಯವಿಲ್ಲದೆ ಪರಿತಪಿಸುತ್ತಿರುವ ಅನಾಥ ನಾಯಿಗಳಿಗೆ ಸಹಕರಿಸುವ ಉದ್ದೇಶದಿಂದ 10 ವರ್ಷದ ಬಾಲಕಿ ಆರಂಭಿಸಿದ ದಿನವಿದು.
ಸರಿ ಸುಮಾರು 14,000 ವರ್ಷಗಳ ಹಿಂದಿನ ಸಮಾಧಿಯೊಂದು ಜರ್ಮನಿಯ ಒಬರ್‌ಕಸಲ್ ಎಂಬ ಊರಿನಲ್ಲಿ ಪತ್ತೆಯಾಗುತ್ತದೆ. ನಾಯಿಯ ಬದುಕು ಮನುಷ್ಯನ ಜೀವನಕ್ಕೆ ಜೊತೆಯಾದ ಕಥೆಯನ್ನು ಹೆಚ್ಚು ಆತ್ಮೀಯವಾಗಿ ಹೇಳುವ ಸಮಾಧಿಯಿದು. ಗಂಡು ಮತ್ತು ಹೆಣ್ಣಿನ ಶವದೊಂದಿಗೆ ನಾಯಿಯನ್ನು ಮಣ್ಣು ಮಾಡಿದ ಜಾಗವಿದು. ಮೂವರು ಒಟ್ಟಿಗೆ ತೀರಿಹೋದರೇ ಎಂಬುದು ತಿಳಿದಿಲ್ಲ, ಆದರೆ ಒಟ್ಟಿಗೆ ಮಣ್ಣಾದರೆಂಬುದು ಇತಿಹಾಸ. ಮನುಷ್ಯ ಮತ್ತು ನಾಯಿಯ ಒಡನಾಟಕ್ಕೆ ಇದೊಂದು ಪುರಾತನ ಆಧಾರವಾಗಿ ನಿಂತಿರುವುದಂತೂ ಸತ್ಯ. ಇಂದು, ಆಗಸ್ಟ್ 26, ಅಂತರ್ ರಾಷ್ಟ್ರೀಯ ಶ್ವಾನ ದಿನ. ಅನಾಥ ನಾಯಿಗಳಿಗೆ ಆಶ್ರಯ ನೀಡಿ ಎಂಬ ಆಶಯದೊಂದಿಗೆ ಆರಂಭವಾದ ದಿನ. ಅದು 2004ರ ಸಮಯ, ಪ್ರಾಣಿಪರವಾದಿ ಹಾಗೂ ಸಾಕುಪ್ರಾಣಿ ಜೀವನಶೈಲಿ ಪರಿಣಿತೆಯಾಗಿ ಪ್ರಸಿದ್ಧಿ ಹೊಂದಿರುವ ಕೊಲಿನ್ ಪೈಜ್ ಎಂಬಾಕೆ ಅಂದು ಕೇವಲ ಹತ್ತುವರ್ಷದ ಬಾಲಕಿ, ಆಕೆ ಆ.26ರಂದು ಶೆಲ್ಟಿ ಎಂಬ ಹೆಸರಿನ ನಾಯಿಯೊಂದನ್ನು ದತ್ತು ಪಡೆಯುತ್ತಾಳೆ, ಅನಾಥ ನಾಯಿಗಳನ್ನು ದತ್ತು ಪಡೆಯುವ ಕ್ರಿಯೆಗೆ ಚಾಲನೆ ನೀಡುತ್ತಾಳೆ. ಇದರಿಂದಾಗಿ ಪ್ರೇರಣೆ ಹೊಂದಿದ ಅಮೆರಿಕದ ಜನರು 2004ರ ನಂತರ ಸುಮಾರು 10ಲಕ್ಷಕ್ಕೂ ಅಧಿಕ ನಾಯಿಗಳನ್ನು ದತ್ತು ಪಡೆಯುತ್ತಾರೆ. ಅನಾಥ ನಾಯಿಗಳ ರಕ್ಷಣೆ, ಮತ್ತಿತರ ಉದ್ದೇಶದ ವಿಶ್ವ ಶ್ವಾನ ದಿನಕ್ಕೆ ಇದು ಪ್ರೇರಣೆಯಾಗುತ್ತದೆ. ನಾಯಿಯು ಮನುಷ್ಯ ಜಗತ್ತನ್ನು ಅಂದಗಾಣಿಸಿದ್ದಕ್ಕೆ ನೀಡುವ ಸಣ್ಣ ಋಣಸಂದಾಯದ ಅಭಿಯಾನವಾಗಿ ದಾಖಲಾಗುತ್ತದೆ.
ಒಂದು ವೈಜ್ಞಾನಿಕ ವಾದದಂತೆ ನಾಯಿಗಳು ಮನುಷ್ಯನ ಸಂಗಾತಿಯಾಗಿದ್ದು ಸುಮಾರು 35,000 ವರ್ಷಗಳ ಹಿಂದೆ. ತೋಳಗಳ ಜಾತಿಗೆ ಸೇರಿದ ನಾಯಿಗಳು ಅಲೆಮಾರಿಯಾಗಿದ್ದ ಮನುಷ್ಯನ ಹಿಂದೆ ಅಲೆಯುವುದಕ್ಕೆ ಆರಂಭಿಸಿದ ಮೊದಲ ಪ್ರಾಣಿಗಳು ಎನ್ನಲಾಗುತ್ತಿದೆ. ಹೆಚ್ಚು ಕಡಿಮೆ ನಾಯಿಯೊಂದೇ ಮನುಷ್ಯನ ಬಳಿ ತಾನಾಗಿಯೇ ಬಂದು ಸ್ನೇಹ ಬಯಸಲು ಯತ್ನಿಸಿದ ಪ್ರಾಣಿ ಎನ್ನಬಹುದು. ಮನುಷ್ಯ ತಿಂದು ಬಿಟ್ಟ ಆಹಾರಗಳನ್ನು ಸೇವಿಸುತ್ತ, ಮನುಷ್ಯನು ಬೇರೆ ಜಾಗಕ್ಕೆ ಹೊರಟಾಗ ಆತನನ್ನು ಹಿಂಬಾಲಿಸಿಕೊಂಡು ಹೋಗುತ್ತಾ ಹಂತ ಹಂತವಾಗಿ ಹತ್ತಿರವಾದ ಪ್ರಾಣಿ ನಾಯಿ.
ಒಂದು ಸಂಶೋಧನೆ ಪ್ರಕಾರ ಆ ಕಾಲಘಟ್ಟದಲ್ಲಿ ತೋಳಗಳಾಗಿದ್ದ ನಾಯಿಗಳು ಮನುಷ್ಯನ ಸಾಕುಪ್ರಾಣಿಯಾದ ನಾಯಿಯಾಗಲು ತಮ್ಮ ಎಂಟು ತಲೆಮಾರುಗಳನ್ನು ತರಬೇತಿಗಾಗಿ ವ್ಯಯಿಸಿದೆ ಎನ್ನಲಾಗುತ್ತದೆ. ಮಧ್ಯಪ್ರಾಚ್ಯ, ಚೀನಾ, ಪೂರ್ವ ಯುರೋಪ್ ಹಾಗೂ ಏಶ್ಯ ಉಪಖಂಡದಲ್ಲಿಯೂ ಹೆಚ್ಚುಕಡಿಮೆ ಒಂದೇ ಸಮಯದಲ್ಲಿ ಈ ಸಾಕುಪ್ರಾಣಿಯಾಗುವ ಕ್ರಿಯೆ ನಡೆದಿದೆ ಎಂದು ಅಂದಾಜಿಸಲಾಗಿದೆ.
ಇಂದು ಜಗತ್ತಿನಲ್ಲಿ ಒಂದು ಅಂದಾಜಿನಂತೆ ಶೇ.57ರಷ್ಟು ಜನರು ಒಂದಲ್ಲ ಒಂದು ರೀತಿಯ ಸಾಕುಪ್ರಾಣಿಗಳನ್ನು ಹೊಂದಿರುವವರಾಗಿದ್ದಾರೆ. ಆ ರೀತಿ ಸಾಕು ಪ್ರಾಣಿ ಹೊಂದಿದವರಲ್ಲಿ ಶೇ.33ರಷ್ಟು ಜನರು ನಾಯಿಯನ್ನು ಸಾಕುವವರು. ನಾಯಿಯೆಂದರೆ ನಿಯತ್ತು, ನಾಯಿಯೆಂದರೆ ನಿಷ್ಕಲ್ಮಷ ಪ್ರೀತಿ ಎಂದು ಭಾವಿಸಿದ ಹಾಗೂ ಅನುಭವಿಸಿರುವ ಲಕ್ಷಾಂತರ ಜನರಿದ್ದಾರೆ. ನಾಯಿಗೆ ತಮ್ಮ ಆಸ್ತಿಯನ್ನು ಬರೆದವರು, ನಾಯಿಯನ್ನೇ ಮದುವೆ ಆಗಲು ಹೊರಟವರೂ ಇದ್ದಾರೆ. ಎಷ್ಟೋ ಜನರಿಗೆ ನಾಯಿ ಮನೆಯ ಸದಸ್ಯನಿಗಿಂತ ಹೆಚ್ಚು. ನಾಯಿಗೂ ಅಷ್ಟೇ ತನ್ನ ಯಜಮಾನನೆಂದರೆ ಜೀವ ಕೊಡುವಷ್ಟು ಪ್ರೇಮ. ಫ್ರಾನ್ಸ್ ಸಂಸ್ಥೆಯಾದ ‘ಎಫ್‌ಸಿಐ’ ಇಂದು ಜಗತ್ತಿನಲ್ಲಿ ಸುಮಾರು 360 ಜಾತಿಯ ಸಾಕು ನಾಯಿಗಳನ್ನು ಮಾನ್ಯ ಮಾಡಿದೆ, ಮನೆಯೊಳಗೆ ಓಡಾಡಿಕೊಂಡಿರುವ ನಾಯಿಯಿಂದ ಹಿಡಿದು ದೇಶರಕ್ಷಣೆಗೆ ಸಜ್ಜಾದ ನಾಯಿಗಳವರೆಗೂ ಹಲವು ತಳಿಗಳಿವೆ, ಹಲವು ರೀತಿಯ ಕೆಲಸಗಳನ್ನು ಮಾಡುವ ನಾಯಿಗಳು ನಮ್ಮ ನಡುವೆ ಇವೆ. ನಾಯಿಗಳಿಂದ ನಮ್ಮ ಒತ್ತಡ ಕಡಿಮೆಯಾಗಿ ಆರೋಗ್ಯ ಸುಧಾರಣೆಯಾಗಲು ಮತ್ತು ಜೀವನದಲ್ಲಿ ಒಂದು ಹುರುಪು ಹಾಗೂ ಹೊಸತನ ಬರಲು ಬಹಳ ಕೊಡುಗೆಯಿದೆ ಎಂದು ಹಲವು ಸಂಶೋಧನೆಗಳು ಸಾಬೀತುಪಡಿಸಿವೆ. ಇಷ್ಟೆಲ್ಲಾ ಅನುಕೂಲ ಹಾಗೂ ಕೆಲಸ ನಿರ್ವಹಿಸುವ ನಾಯಿಗಳ ಬದುಕು ಕೆಲವೆಡೆ ಅಕ್ಷರಶಃ ನಾಯಿಪಾಡಾಗಿದೆ. ಇಂದು ನಾಯಿಗಳ ಬದುಕು ಸಂಕಷ್ಟದಲ್ಲಿದೆ, ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಲು ಸರಕಾರ ಹಾಗೂ ಜವಾಬ್ದಾರಿಯಿಲ್ಲದ ಮನುಷ್ಯ ಇಬ್ಬರೂ ಕಾರಣವಾಗುತ್ತಿದ್ದಾರೆ. ನಾಯಿಯನ್ನು ಮನುಷ್ಯರ ನಡುವೆ ತಂದವರು ನಾವೇ ಅಲ್ಲವೇ, ಅವುಗಳ ನಿರ್ವಹಣೆ ಕೂಡ ನಮ್ಮ ಜವಾಬ್ದಾರಿಯಾಗಬೇಕಿತ್ತು, ಆದರೆ ಆಗುತ್ತಿಲ್ಲ, ಬಿಡಾಡಿ ನಾಯಿಗಳ ಬದುಕು ಸ್ವತಃ ದುಃಖ ಮತ್ತು ಸಮಸ್ಯೆಯನ್ನು ಹೊಂದಿರುವುದರ ಜೊತೆಗೆ ನಮ್ಮ ಬದುಕಿನಲ್ಲಿ ಕೂಡ ಸಮಸ್ಯೆಯನ್ನು ತರುತ್ತದೆ. ಪ್ರತೀ ವರ್ಷ 18 ಸಾವಿರ ಭಾರತೀಯರು ರೇಬೀಸ್‌ಗೆ ತುತ್ತಾಗಿ ಸಾಯುತ್ತಿದ್ದಾರೆ, ಶೇ.87 ಪ್ರಕರಣಗಳಲ್ಲಿ ರೇಬೀಸ್ ಹರಡಲು ಮುಖ್ಯ ಕಾರಣ ಸೋಂಕಿತ ನಾಯಿಗಳ ಕಚ್ಚುವಿಕೆ. ಕೇರಳವೊಂದರಲ್ಲಿಯೇ ಕಳೆದ ವರ್ಷ 95 ಸಾವಿರ ಜನರಿಗೆ ನಾಯಿ ಕಚ್ಚಿದ ಪ್ರಕರಣ ವರದಿಯಾಗಿತ್ತು. ಮಕ್ಕಳನ್ನು ಎಳೆದೊಯ್ದ ಬೀದಿನಾಯಿಗಳ ಚಿತ್ರವೂ ಹೆಡ್‌ಲೈನ್ ವರದಿಯೂ ಆಗಿದ್ದಿದೆ. ನಾಯಿಗಳು ಮನುಷ್ಯನ ಜೊತೆ ಜೊತೆಗೆ ಬಂದ ಪ್ರಾಣಿ. ಅವುಗಳಿಗೆ ಉತ್ತಮ ಬದುಕು ಕಲ್ಪಿಸಿದರೆ ಮಾತ್ರ ನಮಗೆ ನೆಮ್ಮದಿ ದೊರೆಯಬಲ್ಲದೇನೋ.
ಅಂತೂ ‘ಎಲ್ಲಾ ನಾಯಿಗೂ ಇಂದು ದಿನ ಬರತ್ತೆ’ ಎಂಬಂತೆ, ಈ ದಿನ ಬಂದಿದೆ, ಅವುಗಳು ಮನುಷ್ಯ ಕುಲಕ್ಕೆ ತೋರಿರುವ ಅಗಾಧ ಪ್ರೀತಿ ಮತ್ತು ವಿಶ್ವಾಸಕ್ಕೆ ಪ್ರತಿಯಾಗಿ ಅವಗಳಿಗೆ ಆಶ್ರಯ ಅಥವಾ ಅವಗಳಿಗಾಗಿ ದುಡಿಯುತ್ತಿರುವ ಪ್ರಾಣಿ ದಯಾ ಸಂಘಗಳಿಗೆ ಸಹಕಾರವನ್ನು ನೀಡಬೇಕಾಗಿದೆ, ಅವುಗಳು ಬೀದಿನಾಯಿಯಾಗುವುದನ್ನು ನಿಯಂತ್ರಿಸಿ ಮನೆನಾಯಿಗಳನ್ನಾಗಿ ಮಾತ್ರ ಮಾಡಬೇಕಾದ ಅಗತ್ಯವಿದೆ, ಭಾರತದಲ್ಲಿ ಹೆಚ್ಚಾಗಿ ಗೌರವಿಸಲ್ಪಡುವ ದನಗಳೇ ಬೀದಿಯಲ್ಲಿರುವಾಗ ನಾಯಿಗಳ ಕೂಗು ಕೇಳಬಹುದೇ. ತಿಳಿಯದಾಗಿದೆ.
ಖ್ಯಾತ ಮನಃಶಾಸ್ತ್ರಜ್ಞ ಸಿಗ್ಮಂಡ್ ಫ್ರಾಯ್ಡಾ ಒಂದು ಮಾತು ಹೇಳುತ್ತಾನೆ ‘‘ನಾಯಿಗಳು ಸ್ನೇಹಿತರನ್ನು ಪ್ರೀತಿಸುತ್ತವೆ, ಶತ್ರುಗಳನ್ನು ಕಚ್ಚುತ್ತವೆ. ಆದರೆ ಮನುಷ್ಯನಿಗೆ ನಿಜವಾದ ಪ್ರೇಮವೇ ಗೊತ್ತಿಲ್ಲ, ಆತ ಸದಾ ದ್ವೇಷ ಮತ್ತು ಪ್ರೇಮದ ಮಿಶ್ರಣದಲ್ಲಿಯೇ ಬದುಕುತ್ತಿರುತ್ತಾನೆ’’ ಎಂದು, ಹಾಗಾಗಿ ನಾವು ಪ್ರೇಮ ಯಾವುದು ಎಂಬುದನ್ನು ಅರಿಯುವುದಕ್ಕಾದರೂ ನಾಯಿಯನ್ನು ರಕ್ಷಿಸೋಣ, ಆ ಭಾವನೆಯನ್ನಾದರೂ ಈ ದಿನದ ಆಚರಣೆಯಲ್ಲಿ ಮನಕ್ಕಿಳಿಸಿಕೊಳ್ಳೋಣ. ಆಗಲಾದರೂ ಅವುಗಳ ನಿಯತ್ತಿಗೆ ಬೆಲೆ ಸಲ್ಲಿಸುವ ಯೋಗ್ಯತೆ ನಮ್ಮದಾಗುತ್ತದೆ.







