ಎಂಸಿಸಿ ಬ್ಯಾಂಕ್‌ನಿಂದ 8.27 ಕೋಟಿ ರೂ. ನಿವ್ವಳ ಲಾಭ ದಾಖಲೆ: ಅಧ್ಯಕ್ಷ ಅನಿಲ್ ಲೋಬೊ
ಎನ್‌ಪಿಎ ಶೇ. 1.60ಗೆ ಇಳಿಕೆ

ಮಂಗಳೂರು : ಶತಮಾನೋತ್ತರ ದಶಮಾನೋತ್ಸವ (110 ವರ್ಷಗಳು) ಸಂಭ್ರಮದಲ್ಲಿರುವ ಎಂಸಿಸಿ ಬ್ಯಾಂಕ್ ಲಿಮಿಟೆಡ್ ಪ್ರಸಕ್ತ ವರ್ಷ 8.27 ಕೋಟಿ ರೂ. ಗಳ ನಿವ್ವಳ ಲಾಭವನ್ನು ದಾಖಲಿಸಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಅನಿಲ್ ಲೋಬೊ ತಿಳಿಸಿದ್ದಾರೆ.
ಬ್ಯಾಂಕ್‌ನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಾಹಿತಿ ನೀಡಿದ ಅವರು, 2018ರಲ್ಲಿ ಸಂಪೂರ್ಣ ಬಹುಮತದಿಂದ ಆಯ್ಕೆಯಾದ ಆಡಳಿತ ಮಂಡಳಿ ನೇತೃತ್ವದಲ್ಲಿ ಕೋವಿಡ್ ಸಂಕಷ್ಟಗಳ ನಡುವೆಯೂ ಬ್ಯಾಂಕ್‌ನ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಗಳಿಸಿದ ದೊಡ್ಡ ಲಾಭ ಇದಾಗಿರುತ್ತದೆ ಎಂದರು.
2018ನೆ ಸಾಲಿನಲ್ಲಿ 510 ಕೋಟಿರೂ.ಗಳಿದ್ದ ವ್ಯವಹಾರ ಪ್ರಸ್ತುತ 851 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. 2020ರಲ್ಲಿ ಬ್ಯಾಂಕ್‌ನ ನಿವ್ವಳ ಎನ್‌ಪಿಎ ಶೇ. 7.17 ಆಗಿದ್ದು, 2021-22ನೆ ಸಾಲಿಗೆ ಅದು 1.60ಗೆ ಇಳಿಕೆಯಾಗಿದೆ. ಸಾಲ ಮರುಪಾವತಿ ಬಗ್ಗೆ ದಿನನಿತ್ಯ ನಾವು ಗಮನ ಗಮನ ಹರಿಸಿರುವ ಹಿನ್ನೆಲೆಯಲ್ಲಿ ಹಾಗೂ ಗ್ರಾಹಕ ಹಾಗೂ ಸಿಬ್ಬಂದಿಯ ನೆರವಿನಿಂದ ಎನ್‌ಪಿಎ ತೀವ್ರಗತಿಯಲ್ಲಿ ಇಳಿಕೆಯಾಗಲು ಸಾಧ್ಯವಾಗಿದೆ ಎಂದು ಅನಿಲ್ ಲೋಬೋ ಹೇಳಿದರು.
ಗ್ರಾಹಕರ ಅನುಕೂಲಕ್ಕಾಗಿ ಶಾಖೆಗಳನ್ನು ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಇರುವ ಸಂಕೀರ್ಣಗಳಿಗೆ ಸ್ಥಳಾಂತರಿಸಿ ಮೇಲ್ದರ್ಜೆಗೇರಿಸಲಾಗಿದೆ. ಸಿಬ್ಬಂದಿಗೆ ಕೌಶಲ್ಯ ತರಬೇತಿ ನೀಡಲಾಗಿದೆ. ಗ್ರಾಹಕ ನಿರೀಕ್ಷೆಗಳನ್ನು ತಿಳಿದುಕೊಳ್ಳಲು ಬ್ಯಾಂಕ್‌ನ ಎಲ್ಲಾ ಶಾಖೆಗಳಲ್ಲಿ ಗ್ರಾಹಕರ ಸಮಾವೇಶಗಳನ್ನು ನಡೆಸಲಾಗುತ್ತಿದ್ದು, ಕೋವಿಡ್‌ನಿಂದಾಗಿ ಕಳೆದ ಎರಡು ವರ್ಷಗಳಲ್ಲಿ ಸಮಾವೇಶ ನಡೆಸಲು ಸಾಧ್ಯವಾಗಿರಲಿಲ್ಲ. ಇದೀಗ ಮತ್ತೆ ಗ್ರಾಹಕರ ಸಮಾವೇಶ ಪುನರಾರಂಭಿಸಿದ್ದು, ಗ್ರಾಹಕರ ಸಲಹೆ ಹಾಗೂ ಸೂಚನೆಗಳನ್ನು ಮುಕ್ತವಾಗಿ ಸ್ವೀಕರಿಸಲಾಗುವುದು. ಪ್ರತಿ ಸಮಾವೇಶಕ್ಕೆ ಶಾಖೆಯ ಜವಾಬ್ದಾರಿ ಹೊತ್ತಿರುವ ನಿರ್ದೇಶಕರು, ಉನ್ನತ ಅಧಿಕಾರಿಗಳು ಹಾಗೂ ಇತರ ನಿರ್ದೇಶಕರು ಹಾಜರಿರುತ್ತಾರೆ ಎಂದು ಅನಿಲ್ ಲೋಬೋ ಹೇಳಿದರು.
ಬ್ಯಾಂಕ್‌ನ ಶತಮಾನೋತ್ತರ ದಶಮಾನೋತ್ಸವ ಸಮಾರಂಭಗಳು ವಿವಿಧ ಕಾರ್ಯಕ್ರಮಗಳೊಂದಿಗೆ ನವೆಂಬರ್ ತಿಂಗಳಿನಿಂದ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಅನಿಲ್ ಲೋಬೋ ಈ ಸಂದರ್ಭ ತಿಳಿಸಿದರು.
ಗೋಷ್ಠಿಯಲ್ಲಿ ಉಪಾಧ್ಯಕ್ಷ ಜೆರಾಲ್ಡ್ ಡಿಸಿಲ್ವಾ, ಪ್ರಧಾನ ವ್ಯವಸ್ಥಾಪಕ ಸುನಿಲ್ ಮಿನೇಜಸ್, ನಿರ್ದೇಶಕರಾದ ಆ್ಯಂಡ್ರೂ ಡಿಸೋಜಾ, ಮಾರ್ಸೆಲ್ ಡಿಸೋಜಾ, ಐರಿನ್ ರೆಬೆಲ್ಲೋ, ಡಾ. ಫ್ರೀಡಾ ರಾಡ್ರಿಗಸ್, ಡೇವಿಡ್ ಡಿಸೋಜಾ, ರೋಶನ್ ಡಿಸೋಜಾ, ಡಾ. ಜೆರಾಲ್ಡ್ ಪಿಂಟೋ, ಅನಿಲ್ ಪತ್ರಾವೊ, ಸುಶಾಂತ್, ಹೆರಾಲ್ಡ್ ಮೊಂತೆರೊ, ಜೆ.ಪಿ. ರಾಡ್ರಿಗಸ್ ಉಪಸ್ಥಿತರಿದ್ದರು.
ಆ. 28ರಿಂದ ಶಾಖಾ ಗ್ರಾಹಕರ ಸಭೆ
ಅವಿಭಜಿತ ದ.ಕ. ಜಿಲ್ಲೆಯಲ್ಲಿರುವ ಬ್ಯಾಂಕ್‌ನ ಒಟ್ಟು 16 ಶಾಖೆಗಳಲ್ಲಿ ಗ್ರಾಹಕರ ಸಭೆ ನಡೆಯಲಿದ್ದು, ಆ. 28ರಂದು ಬೆಳಗ್ಗೆ 11 ಗಂಟೆಗೆ ಮಂಗಳೂರಿನ ಸ್ಥಾಪಕರ ಶಾಖೆಯಲ್ಲಿ ಪ್ರಥಮ ಸಭೆ ನಡೆಯಲಿದೆ. ಅಂದು ಸಂಜೆ 5.45ಕ್ಕೆ ಕಂಕನಾಡಿ, ಮೋರ್ಗನ್ಸ್‌ಗೇಟ್ ಶಾಖೆಯಲ್ಲಿ, ಸೆ. 4ರಂದು ಬೆಳಗ್ಗೆ 11 ಗಂಟೆಗ ಕಿನ್ನಿಗೋಳಿ, ಸಂಜೆ 5.30ಕ್ಕೆ ಮೂಡಬಿದ್ರೆ, ಸೆ. 10ರಂದು ಬೆಳಗ್ಗೆ 11 ಗಂಟೆಗೆ ಅಶೋಕನಗರ ಸಂಜೆ 6 ಗಂಟೆಗೆ ಕುಲಶೇಖರ, ಸೆ. 11ರಂದು ಬೆಳಗ್ಗೆ 11 ಗಂಟೆಗೆ ಬಜಪೆ, ಸಂಜೆ 6 ಗಂಟೆಗೆ ಕಾರ್ಕಳ, ಸೆ. 18ರಂದು ಬೆಳಗ್ಗೆ 11 ಗಂಟೆಗೆ ಉಳ್ಳಾಲ, ಸಂಜೆ 5.30ಕ್ಕೆ ಪುತ್ತೂರು, ಅಕ್ಟೋಬರ್ 9ರಂದು ಬೆಳಗ್ಗೆ 11 ಗಂಟೆಗೆ ಕುಂದಾಪುರ, ಸಂಜೆ 6 ಗಂಟೆಗೆ ಶಿರ್ವಾ, ಅ. 16ರಂದು ಬೆಳಗ್ಗೆ 11 ಗಂಟೆಗೆ ಬಿಸಿರೋಡ್, ಅ. 23ರಂದು ಬೆಳಗ್ಗೆ 11 ಗಂಟೆಗೆ ಉಡುಪಿ ಹಾಗೂ ಅ. 30ರಂದು ಬೆಳಗ್ಗೆ 11 ಗಂಟೆಗೆ ಸುರತ್ಕಲ್ ಶಾಖೆಯಲ್ಲಿ ಸಭೆ ನಡೆಯಲಿದೆ.