ದ್ವೇಷ ಭಾಷಣ ಪ್ರಕರಣ: ಆದಿತ್ಯನಾಥ್ ವಿರುದ್ಧ ಕಾನೂನು ಕ್ರಮ ನಿರಾಕರಣೆಯನ್ನು ಪ್ರಶ್ನಿಸಿದ ಅರ್ಜಿ ವಜಾಗೊಳಿಸಿದ ಸುಪ್ರೀಂ

ಹೊಸದಿಲ್ಲಿ: ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರು 2007ರಲ್ಲಿ ನೀಡಿದ್ದರೆನ್ನಲಾದ ದ್ವೇಷದ ಭಾಷಣಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅನುಮತಿ ನೀಡಲು ರಾಜ್ಯ ಸರಕಾರ ನಿರಾಕರಿಸಿದ್ದ ಕ್ರಮವನ್ನು ಅಲಹಾಬಾದ್ ಹೈಕೋರ್ಟ್ ಎತ್ತಿ ಹಿಡಿದಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಇಂದು ಉನ್ನತ ನ್ಯಾಯಾಲಯ ವಜಾಗೊಳಿಸಿದೆ.
ಈ ಪ್ರಕರಣದಲ್ಲಿ ಅನುಮತಿ ನೀಡಲಾಗಿಲ್ಲದೇ ಇರುವ ವಿಚಾರವನ್ನು ಈಗ ಪರಿಗಣಿಸುವ ಅಗತ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರ ನೇತೃತ್ವದ ಪೀಠ ಹೇಳಿದೆ.
"ಈ ಪ್ರಕರಣದಲ್ಲಿ ಕಾನೂನು ಕ್ರಮಕ್ಕೆ ಅನುಮತಿ ನೀಡುವ ಕುರಿತಾದ ಕಾನೂನಾತ್ಮಕ ಪ್ರಶ್ನೆಗಳ ಬಗ್ಗೆ ನಾವು ಈಗ ಪರಿಗಣಿಸಬೇಕೆಂದು ನಮಗನಿಸುತ್ತಿಲ್ಲ. ಈ ಅಪೀಲನ್ನು ವಜಾಗೊಳಿಸಲಾಗಿದೆ" ಎಂದು ಜಸ್ಟಿಸ್ ರವಿಕುಮಾರ್ ಮತ್ತು ಜಸ್ಟಿಸ್ ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠ ಹೇಳಿದೆ.
ಗೋರಖಪುರದಲ್ಲಿ ಜನವರಿ 27, 2007 ರಂದು ಹಿಂದು ಯುವ ವಾಹಿನಿ ಕಾರ್ಯಕರ್ತರ ಸಭೆಯಲ್ಲಿ ಆದಿತ್ಯನಾಥ್ ಅವರು ಮುಸ್ಲಿಂ ವಿರೋಧಿ ಹೇಳಿಕೆಗಳನ್ನು ನೀಡಿದ್ದರು ಎಂದು ಅರ್ಜಿದಾರ ಪರ್ವೇಜ್ ಪರ್ವಾಝ್ ಆರೋಪಿಸಿದ್ದರು.
ಈ ಕುರಿತು ಫೆಬ್ರವರಿ 2018ರಲ್ಲಿ ತೀರ್ಪು ನೀಡಿದ್ದ ಅಲಹಾಬಾದ್ ಹೈಕೋರ್ಟ್, ಕಾನೂನು ಕ್ರಮ ಕ್ಯಗೊಳ್ಳಲು ಅನುಮತಿ ನಿರಾಕರಿಸಿದ್ದ ವಿಚಾರದಲ್ಲಿ ಯಾವುದೇ ನೂನ್ಯತೆಯಾಗಿರುವುದು ಕಂಡುಬಂದಿಲ್ಲ ಎಂದು ಹೇಳಿತ್ತು.
ಎರಡು ಸಮುದಾಯಗಳ ನಡುವೆ ದ್ವೇಷದ ಭಾವನೆಗಳನ್ನು ಮೂಡಿಸಲು ಯತ್ನಿಸಿದ್ದಾರೆಂದು ಆರೋಪಿಸಿ ಆಗ ಸಂಸದರಾಗಿದ್ದ ಆದಿತ್ಯನಾಥ್ ಹಾಗೂ ಹಲವು ಮಂದಿ ಇತರರ ವಿರುದ್ಧ ಗೋರಖಪುರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿತ್ತು. ಆದಿತ್ಯನಾಥ್ ಅವರ ದ್ವೇಷದ ಭಾಷಣದ ನಂತರ ಗೋರಖಪುರದಲ್ಲಿ ಹಲವಾರು ಅಹಿತಕರ ಘಟನೆಗಳು ನಡೆದಿದ್ದವು ಎಂದೂ ಆರೋಪಿಸಲಾಗಿತ್ತು.







