BBMP ಚುನಾವಣೆ: ಮತ್ತೆ ಹೈಕೋರ್ಟ್ ಅಂಗಳಕ್ಕೆ

ನವದೆಹಲಿ, ಆ.26: ಬಿಬಿಎಂಪಿ (BBMP) ಚುನಾವಣೆ ವಿವಾದ ಚೆಂಡು ಸುಪ್ರೀಂ ಕೋರ್ಟ್ ಅಂಗಳ ತಲುಪಿ ಮತ್ತೆ ಉಚ್ಚ ನ್ಯಾಯಾಲಯಕ್ಕೆ ಬಂದಿದ್ದು, ಚುನಾವಣೆ ನಡೆಸುವ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವ ಅವಕಾಶ ಹೈಕೋರ್ಟ್‍ಗೆ ರವಾನಿಸಿದೆ.
ಈಗಾಗಲೇ ಒಂದು ಕಡೆ ಚುನಾವಣಾ ಆಯೋಗ ಮತದಾರರ ಕರಡು ಪಟ್ಟಿಯನ್ನು ಬಿಡುಗಡೆ ಮಾಡಿ ಸಿದ್ಧತೆ ಮಾಡಿಕೊಳ್ಳುತ್ತಿದ್ದರೆ ಮತ್ತೊಂದೆಡೆ ಶುಕ್ರವಾರ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್‍ನ ನ್ಯಾಯಮೂರ್ತಿ ಅಬ್ದುಲ್ ನಜೀರ್ ನೇತೃತ್ವದ ವಿಭಾಗೀಯ ನ್ಯಾಯಪೀಠ, ಕರ್ನಾಟಕ ಹೈಕೋರ್ಟ್‍ನಲ್ಲಿ ನಡೆಯುತ್ತಿರುವ ಕ್ಷೇತ್ರ ಪುನರ್ ವಿಂಗಡಣೆ ಆಕ್ಷೇಪ ಕುರಿತ ಅರ್ಜಿ ವಿಚಾರಣೆ ಇತ್ಯರ್ಥಪಡಿಸಲಿ ಎಂದು ಸೂಚನೆ ನೀಡಿ ವಿಚಾರಣೆಯನ್ನು ಅಕ್ಟೋಬರ್ ಗೆ ಮುಂದೂಡಿಕೆ ಮಾಡಿದೆ.
ಈ ಹಿನ್ನೆಲೆಯಲ್ಲಿ ಹೈಕೋರ್ಟ್‍ನ ಏಕಸದಸ್ಯ ನ್ಯಾಯಪೀಠದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರು, ಇದೇ ಆ.29ರಂದು ಕ್ಷೇತ್ರ ಪುನರ್ ವಿಂಗಡಣೆ ಕುರಿತು ವಿಚಾರಣೆ ನಡೆಸಲಿದ್ದಾರೆ. ನಂತರ ಸೆ.1ರಂದು ಮೀಸಲಾತಿ ಕುರಿತ ವಿಚಾರಣೆ ನಡೆಯಲಿದೆ.
ಒಂದು ವೇಳೆ ಹೈಕೋರ್ಟ್‍ನಲ್ಲಿ ಕೇಸ್ ಇತ್ಯರ್ಥವಾದರೆ ಸುಪ್ರೀಂ ಕೋರ್ಟ್‍ನಲ್ಲೂ ಹಸಿರು ನಿಶಾನೆ ಸಿಗುವ ಎಲ್ಲ ಸಾಧ್ಯತೆಗಳೂ ಇವೆ ಎಂದು ಹೇಳಲಾಗುತ್ತಿದೆ. ಅಕ್ಟೋಬರ್‍ನಲ್ಲಿ ಬಿಬಿಎಂಪಿ ಚುನಾವಣೆ ನಡೆಯುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ, ಪ್ರಸ್ತುತ ಎಲ್ಲ ಅಡೆತಡೆಗಳನ್ನು ನೋಡಿದರೆ ಮತ್ತು ಚುನಾವಣೆ ಅನಿಶ್ಚಿತತೆಗೆ ಬೀಳಬಹುದು ಎಂದು ಹೇಳಲಾಗುತ್ತಿದೆ. ಈ ವರ್ಷಾಂತ್ಯದಲ್ಲಿ ಚುನಾವಣೆ ನಡೆಯದಿದ್ದರೆ 2023ರಲ್ಲಿ ಹೊಸ ಜನಗಣತಿ ಅನ್ವಯವಾಗುತ್ತದೆ. ಅದರಂತೆ ಮತದಾರರ ಪಟ್ಟಿ ಸಿದ್ಧಪಡಿಸಲು ಕೂಡ ಬಹುಕಾಲ ಹಿಡಿಯುತ್ತದೆ. ಇದರಿಂದಾಗಿ ಚುನಾವಣೆ ವಿಳಂಬವಾಗುವುದಂತೂ ನಿಶ್ಚಿತ.
ಸೆ.1ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್
ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದ ಅರ್ಜಿ ಶುಕ್ರವಾರ ಸುಪ್ರೀಂ ಕೋರ್ಟ್‍ನಲ್ಲಿ ವಿಚಾರಣೆಗೆ ಬರುವ ಹಿನ್ನೆಲೆಯಲ್ಲಿ ಹೈಕೋರ್ಟ್ ನ್ಯಾಯಪೀಠ, ಗುರುವಾರ ವಿಚಾರಣೆಯನ್ನು ಸೆ.1ಕ್ಕೆ ಮುಂದೂಡಿತ್ತು.







