ಆ.27ರಿಂದ ಸಿಪಿಐ ದ.ಕ., ಉಡುಪಿ ಜಿಲ್ಲಾ 24ನೇ ಸಮ್ಮೇಳನ

ಬಂಟ್ವಾಳ : ಭಾರತೀಯ ಕಮ್ಯುನಿಸ್ಟ್ ಪಕ್ಷ (ಸಿಪಿಐ)ದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ 24ನೇ ಸಮ್ಮೇಳನ ಆ.27ರಿಂದ 29ರ ವರೆಗೆ ಬಂಟ್ವಾಳದಲ್ಲಿ ನಡೆಯಲಿದೆ ಎಂದು ಸಿಪಿಐ ದ.ಕ. ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್ ಹೇಳಿದರು.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.14ರಿಂದ 18ರ ವರೆಗೆ ವಿಜಯವಾಡದಲ್ಲಿ ಪಕ್ಷದ ರಾಷ್ಟ್ರೀಯ ಸಮ್ಮೇಳನ ಹಾಗೂ ಸೆ.25ರಿಂದ 27ರ ವರೆಗೆ ಪಕ್ಷದ ರಾಜ್ಯ ಸಮ್ಮೇಳನ ನಡೆಯಲಿದೆ. ಇದರ ಪೂರ್ವಭಾವಿಯಾಗಿ ದ.ಕ. ಮತ್ತು ಉಡುಪಿ ಜಿಲ್ಲಾ ಸಮ್ಮೇಳನ ಬಂಟ್ವಾಳದಲ್ಲಿ ನಡೆಯಲಿದೆ ಎಂದರು.
ಜಿಲ್ಲಾ ಸಮ್ಮೇಳನದ ಪ್ರಯುಕ್ತ ಆ.27 ಮತ್ತು 28ರಂದು ಬಂಟ್ವಾಳ ಬೈಪಾಸ್ ನಲ್ಲಿರುವ ಕಾ. ಎ.ಶಾಂತಾರಾಮ ಪೈ ಸ್ಮಾರಕ ಭವನದಲ್ಲಿ ಪಕ್ಷದ ಪ್ರತಿನಿಧಿ ಸಮಾವೇಶ ನಡೆಯಲಿದೆ. 27ರಂದು ಬೆಳಗ್ಗೆ 10ಕ್ಕೆ ಧ್ವಜಾರೋಹಣ ನಡೆಯಲಿದೆ. 28ರಂದು ಸಂಜೆ 4ಕ್ಕೆ ಪಕ್ಷದ ಕಚೇರಿಯಿಂದ ಬಂಟ್ವಾಳದ ವಿವಿಧ ಮಾರ್ಗವಾಗಿ ಬೈಕ್ ಜಾಥ ನಡೆಯಲಿದೆ ಎಂದು ತಿಳಿಸಿದರು.
ಆ.29ರಂದು ಸಮ್ಮೇಳನದ ಬಹಿರಂಗ ಸಭೆ ಬಿ.ಸಿ.ರೋಡ್ ವೃತ್ತದ ಬಳಿಯ ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣ ಗುರು ಸಭಾ ಭವನದಲ್ಲಿ ನಡೆಯಲಿದೆ. ಅಂದು ಬೆಳಗ್ಗೆ 10ಕ್ಕೆ ಸರಿಯಾಗಿ ಬಿ.ಸಿ.ರೋಡ್ ಕೈಕಂಬದಿಂದ ಸಭಾ ಭವನದ ವರೆಗೆ ವರ್ಣರಂಜಿತ ಜಾಥ ನಡೆಯಲಿದೆ ಎಂದರು.
ಬಹಿರಂಗ ಸಭೆಯ ಅಧ್ಯಕ್ಷತೆಯನ್ನು ಸಿಪಿಐ ದ.ಕ. ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ಕಾ. ವಿ.ಕುಕ್ಯಾನ್ ವಹಿಸಲಿದ್ದು, ಕೇರಳ ರಾಜ್ಯಸಭಾ ಸದಸ್ಯ ಕಾ. ಸಂತೋಷ್ ಕುಮಾರ್ ಉದ್ಘಾಟಿಸಲಿದ್ದಾರೆ. ಸಿಪಿಐ ಕರ್ನಾಟಕ ರಾಜ್ಯ ಕಾರ್ಯದರ್ಶಿ ಕಾ. ಸಾತಿ ಸುಂದರೇಶ್ ಮತ್ತು ರಾಷ್ಟ್ರೀಯ ಮಂಡಳಿ ಮಾಜಿ ಸದಸ್ಯ ಕಾ. ಡಾ. ಸಿದ್ದನಗೌಡ ಪಾಟೀಲ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಭಾರತದ ಇತಿಹಾಸದಲ್ಲಿ 97 ವರ್ಷಗಳ ಚರಿತ್ರೆ ಇರುವ ಭಾರತೀಯ ಕಮ್ಯುನಿಷ್ಟ್ ಪಕ್ಷ, ಕೃಷಿ, ಕೂಲಿ, ಬೀಡಿ, ಅಂಗನವಾಡಿ, ಬಿಸಿಯೂಟ, ಆಶಾ, ಮನೆ ಕೆಲಸ, ಕಟ್ಟಡ ಮತ್ತಿತರ ಅಸಂಘಟಿತ ಕಾರ್ಮಿಕರ ಕೆಲಸದ ಭದ್ರತೆ ಮತ್ತು ಸವಲತ್ತಿಗಾಗಿ ಹಾಗೂ ಭೂ ಸುಧಾರಣೆ, ಬಗರ್ ಹುಕುಂ, ಬ್ಯಾಂಕ್ ಸಹಿತ ಮತ್ತಿತರ ರಂಗದ ಉನ್ನತೀಕರಣಕ್ಕಾಗಿ ನಿರಂತರ ಹೋರಾಟಗಳನ್ನು ನಡೆಸುತ್ತಾ ಬಂದಿದೆ. ಹಲವು ಕಾರಣಗಳಿಂದ ಪಕ್ಷದ ಬೆಳವಣಿಗೆಗೆ ತೊಡಕಾಗಿದ್ದು ಅವುಗಳನ್ನು ನಿವಾರಿಸಿ ಪಕ್ಷವನ್ನು ಸಂಘಟಿಸಲು ಸಮ್ಮೇಳದಲ್ಲಿ ಚರ್ಚೆಗಳು ನಡೆಯಲಿವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ದ.ಕ. ಮತ್ತು ಉಡುಪಿ ಜಿಲ್ಲಾ ಸಹ ಕಾರ್ಯದರ್ಶಿಗಳಾದ ಬಿ.ಶೇಖರ್, ವಿ.ಎಸ್.ಬೇರಿಂಜ, ಪ್ರಮುಖರಾದ ಎಂ.ಕರುಣಾಕರ್, ಸುರೇಶ್ ಕುಮಾರ್, ಕೃಷ್ಣಪ್ಪ ವಾಮಂಜೂರು ಉಪಸ್ಥಿತರಿದ್ದರು.







