ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಮುಂದುವರಿಕೆಗೆ ಹೈಕೋರ್ಟ್ ಆದೇಶ

ಮಂಗಳೂರು, ಆ.26: ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರನ್ನು ಮುಂದುವರಿಸಿ ರಾಜ್ಯ ಹೈಕೋರ್ಟ್ ಆದೇಶಿಸಿದೆ.
ಹಾಲಿ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿಯನ್ನು ವಕ್ಫ್ ಮತ್ತು ಹಜ್ ಸಚಿವರ ಟಿಪ್ಪಣಿ ಯಂತೆ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆ.19ರಂದು ತಡೆ ಹಿಡಿದಿದ್ದರು. ಇದನ್ನು ಪ್ರಶ್ನಿಸಿ ದ.ಕ. ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರಾಗಿದ್ದ ಅಬ್ದುಲ್ ನಾಸೀರ್ ಲಕ್ಕಿಸ್ಟಾರ್ ರಾಜ್ಯ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಪ್ರಾಥಮಿಕ ವಿಚಾರಣೆಯಲ್ಲಿಯೇ ವಕ್ಫ್ ಮಂಡಳಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಆದೇಶಕ್ಕೆ ತಡೆ ನೀಡಿದ್ದಾರೆ. ಅಲ್ಲದೆ ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರಾಗಿ ಅಬ್ದುಲ್ ನಾಸೀರ್ ಲಕ್ಕಿಸ್ಟಾರ್ ಹಾಗೂ ಇತರ ಸದಸ್ಯರನ್ನು ಮುಂದುವರಿಸಿ ಆ.24ರಂದು ಆದೇಶಿಸಿದ್ದಾರೆ.
ಅರ್ಜಿದಾರರ ಪರವಾಗಿ ಹೈಕೋರ್ಟ್ ನ್ಯಾಯವಾದಿ ಶಾಹುಲ್ ಹಮೀದ್ ವಾದ ಮಂಡಿಸಿದ್ದರು.
Next Story