ಯುವಕನ ಕೊಲೆಗೆ ಯತ್ನ: ಆರೋಪ

ಬೆಂಗಳೂರು, ಆ.26: ದ್ವಿಚಕ್ರ ವಾಹನದಲ್ಲಿ ಬಂದ ಮೂವರು ಡ್ರಾಗರ್ ಹಾಗೂ ಕಬ್ಬಿಣದ ರಾಡ್‍ಗಳಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ಗೋವಿಂದರಾಜನಗರದಲ್ಲಿ ಗುರುವಾರ ರಾತ್ರಿ ನಡೆದಿದೆ.
ಅಗ್ರಹಾರ ದಾಸರಹಳ್ಳಿ ನಿವಾಸಿ ಪ್ರವೀಣ್(30) ರಾಜಾಜಿನಗರದ ಇಂಡಸ್ಟ್ರೀಯಲ್ ಟೌನ್‍ನಲ್ಲಿರುವ ಜೆಕೆ ಇಂಡಸ್ಟ್ರೀಸ್‍ನ ಉದ್ಯೋಗಿಯಾಗಿದ್ದು, ರಾತ್ರಿ 9ರ ಸುಮಾರಿನಲ್ಲಿ ಸ್ನೇಹಿತ ಚಂದ್ರು ಜತೆ ಟೀ ಕುಡಿಯಲು ಮಾಗಡಿ ಮುಖ್ಯರಸ್ತೆಯ ಅಗ್ರಹಾರ ದಾಸರಹಳ್ಳಿ ಬಸ್ ನಿಲ್ದಾಣದ ಹತ್ತಿರ ಬಂದಿದ್ದಾರೆ. ಸ್ನೇಹಿತನ ಜತೆ ಫುಟ್‍ಪಾತ್ ಬಳಿ ನಿಂತು ಪ್ರವೀಣ್ ಮಾತನಾಡುತ್ತಿದ್ದಾಗ, ಪರಿಚಯವಿದ್ದ ಪ್ರಜ್ವಲ್, ಪ್ರಶಾಂತ್ ಮತ್ತು ಕಿರಣ್ ದ್ವಿಚಕ್ರ ವಾಹನದಲ್ಲಿ ಇತರರ ಬಳಿ ಬಂದಿದ್ದಾರೆ.
ಈ ಮೂವರು ಕೈಯಲ್ಲಿ ಡ್ರಾಗರ್ ಹಾಗೂ ಕಬ್ಬಿಣದ ರಾಡುಗಳನ್ನು ಹಿಡಿದುಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ, ನಮ್ಮನ್ನು ಗುರಾಯಿಸುತ್ತಿದ್ದೀಯಾ, ನಿನ್ನನ್ನು ಮುಗಿಸುತ್ತೇವೆ ಎಂದು ಪ್ರವೀಣ್ ಜತೆ ಜಗಳ ಮಾಡಿದ್ದಾರೆ ಎನ್ನಲಾಗಿದೆ.
ಪ್ರಜ್ವಲ್ ಏಕಾಏಕಿ ಡ್ರಾಗರ್ ನಿಂದ ಪ್ರವೀಣ್ ತಲೆಗೆ ಹೊಡೆದಿದ್ದಾನೆ. ಪ್ರಜ್ವಲ್ ಜತೆಗೆ ಪ್ರಶಾಂತ್ ಮತ್ತು ಕಿರಣ್ ಸೇರಿಕೊಂಡು ಬೆನ್ನಿಗೆ ಮತ್ತು ದೇಹದ ಇತರೆ ಭಾಗಗಳಿಗೆ ಕಬ್ಬಿಣದ ರಾಡುಗಳಿಂದ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಕೊಲೆಗೆ ಯತ್ನಿಸಿದ ಹಿನ್ನೆಲೆಯಲ್ಲಿ ಪ್ರಜ್ವಲ್, ಪ್ರಶಾಂತ್, ಕಿರಣ್ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗೋವಿಂದರಾಜನಗರ ಪೊಲೀಸ್ ಠಾಣೆಗೆ ಪ್ರವೀಣ್ ದೂರು ನೀಡಿದ್ದಾರೆ.







