ಸೀಮೆಎಣ್ಣೆ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಸಚಿವರಿಗೆ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟ ಮನವಿ

ಮಲ್ಪೆ: ಸೀಮೆಎಣ್ಣೆ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟವು, ರಾಜ್ಯ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಎಸ್. ಅಂಗಾರ ಅವರಿಗೆ ಮನವಿ ನೀಡಿ ಆಗ್ರಹಿಸಿತು.
ರಾಜ್ಯದ ಮೂರು ಕರಾವಳಿ ಜಿಲ್ಲೆಗಳ ಒಟ್ಟು 8030 ಸೀಮೆಎಣ್ಣೆ ರಹದಾರಿ ಗಳಿಗೆ ಮಾಸಿಕ 300 ಲೀ.ನಂತೆ ಸರಕಾರ ಆಗಸ್ಟ್ ತಿಂಗಳಿಂದ ಆದೇಶ ನೀಡಿದ್ದರೂ ಇಲ್ಲಿಯವರೆಗೂ ಅದು ಬಿಡುಗಡೆಯಾಗದೆ ಬಹಳ ತೊಂದರೆಯಾಗುತ್ತಿದೆ ಎಂದು ನಾಡದೋಣಿ ಮೀನುಗಾರರು ಸಚಿವರಿಗೆ ಮನವರಿಕೆ ಮಾಡಿದರು.
ರಾಜ್ಯದಲ್ಲಿರುವ ಸೀಮೆಎಣ್ಣೆ ಪರ್ಮಿಟ್ ನವೀಕರಣವನ್ನು ಕಳೆದ ವರ್ಷದಂತೆ ನವೀಕರಿಸಬೇಕು. ಶೀರೂರು ಸೇರಿದಂತೆ ರಾಜ್ಯದ ಕೆಲವು ಭಾಗಗಳಲ್ಲಿ ಪ್ರಕೃತಿ ವಿಕೋಪದಿಂದ ನಾಡದೋಣಿಗಳಿಗೆ ಅಪಾರ ನಷ್ಟ ಉಂಟಾಗಿದ್ದು ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಸರಕಾರದಿಂದ ಗರಿಷ್ಟ ಪರಿಹಾರ ದೊರಕಿಸಿಕೊಡ ಬೇಕು. ಮತ್ಸ್ಯಸಂಪದ ಯೋಜನೆಯಲ್ಲಿ ಸಾಂಪ್ರದಾಯಿಕ ದೋಣಿಗಳ ಮೋಟರೀಕರಣಕ್ಕೆ ಕೊಡುತ್ತಿರುವ ಸಹಾಯಧನವನ್ನು ಕೈಬಿಟ್ಟಿದ್ದು ಅದನ್ನು ಈ ಹಿಂದಿನಂತೆ ಮುಂದುವರಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮೀನುಗಾರರ ಸಚಿವರ ಸಭೆಯಲ್ಲಿ ಫೆಡರೇಶನ್‌ನ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ನಾಡದೋಣಿ ಮೀನುಗಾರರ ಒಕ್ಕೂಟದ ಅಧ್ಯಕ್ಷ ಆನಂದ ಖಾರ್ವಿ ಉಪ್ಪುಂದ, ಪ್ರಧಾನ ಕಾರ್ಯದರ್ಶಿ ಗೋಪಾಲ್ ಆರ್. ಕೆ, ಉಪಾಧ್ಯಕ್ಷರಾದ ಚಂದ್ರಕಾಂತ ಕರ್ಕೇರ, ವಿಜಯ ಬಂಗೇರ ಹೆಜಮಾಡಿ, ಸುಂದರ ಸಾಲ್ಯಾನ್, ಕೋಶಾಧಿಕಾರಿ ಪುರಂದರ ಕೋಟ್ಯಾನ್, ಸಂಘಟನಾ ಕಾರ್ಯದರ್ಶಿ ವಿಕ್ರಂ ಸಾಲ್ಯಾನ್, ಸಂಘದ ಪದಾಧಿಕಾರಿಗಳು ಉಪಸ್ಥಿತದ್ದರು.








