ಅಕ್ರಮದ ನೆಪದಲ್ಲಿ ಬಡ ಮೀನುಗಾರರ ಶೆಡ್ ಉರುಳಿಸಿದ ಉಡುಪಿ ನಗರಸಭೆ
ನಿರ್ಮಾಣ ಹಂತದಲ್ಲಿದ್ದ ಮೀನು ಮಾರಾಟ ಶೆಡ್

ಉಡುಪಿ, ಆ.26: ನಗರದ ಕಿನ್ನಿಮೂಲ್ಕಿ ಸ್ವಾಗತ ಗೋಪುರ ಬಳಿ ಮೀನುಗಾರ ಮಹಿಳೆಯರ ಸುರಕ್ಷತೆಗಾಗಿ ನಿರ್ಮಾಣಗೊಳ್ಳುತಿದ್ದ ಮೀನುಗಾರರ ಶೆಡ್‌ನ್ನು ಉಡುಪಿ ನಗರಸಭೆ ಮೂಲಕ ಇಂದು ಕೆಡವಿ ಹಾಕಿದೆ. ಅಕ್ರಮ ನಿರ್ಮಾಣದ ನೆಪದಲ್ಲಿ ನಗರಸಭೆ ಜೆಸಿಬಿ ಮೂಲಕ ಉರುಳಿಸಿದೆ.
ಕಳೆದ ಸುಮಾರು ನಾಲ್ಕು ದಶಕಗಳಿಂದ ಕಿನ್ನಿಮೂಲ್ಕಿ ಸ್ವಾಗತಗೋಪುರ ಪರಿಸರದಲ್ಲಿ ಬಿಸಿಲು-ಮಳೆಯ ಮಧ್ಯೆಯೇ ಕುಳಿತು ಮೀನುಗಾರ ಮಹಿಳೆಯರು ಇಲ್ಲಿ ದಿನನಿತ್ಯ ಮೀನು ಮಾರಾಟ ಮಾಡುತಿದ್ದರು. ಇವರಿಗೆ ತಲೆಯ ಮೇಲೊಂದು ರಕ್ಷಣೆಗಾಗಿ ಸ್ಥಳೀಯ ನಗರಸಭಾ ಸದಸ್ಯೆ ಅಮೃತ ಕೃಷ್ಣಮೂರ್ತಿ ತನ್ನ ಸ್ವಂತ ಖರ್ಚಿನಲ್ಲಿ ಇಂದು ಶೆಡ್ ನಿರ್ಮಾಣಕ್ಕೆ ಮುಂದಾಗಿದ್ದರು.
ಆದರೆ ನಿರ್ಮಾಣದ ಆರಂಭಿಕ ಹಂತದಲ್ಲಿರುವಾಗಲೇ ನಗರಸಭೆಯ ಅಧಿಕಾರಿಗಳು ಜೆಸಿಬಿ ಬಳಸಿ ಅದನ್ನು ನೆಲಸಮಗೊಳಿಸಿದರು. ಇದು ನಗರಸಭೆ ವಿರುದ್ಧ ಸ್ಥಳೀಯರು ಹಾಗೂ ರಿಕ್ಷಾ ಚಾಲಕರ ಆಕ್ರೋಶಕ್ಕೆ ಕಾರಣವಾಯಿತು.
ನಗರದ ಪ್ರತಿಷ್ಠಿತ ಕಟ್ಟಡಗಳಿಗೆ ಇಲ್ಲದ ಕಾನೂನುಗಳನ್ನು ನಮ್ಮ ಮೇಲೆ ಹೇರಲಾಗುತ್ತಿದೆ ಎಂದು ಅವರು ಆರೋಪಿಸಿದರು. ಎಚ್ಚರಿಕೆಯನ್ನಾಗಲೀ, ನೋಟಿಸನ್ನಾಗಲೀ ನೀಡದೆ ಶೆಡ್ ತೆರವು ಮಾಡಿದ್ದಕ್ಕೆ ಜರು ಕ್ರೋಧ ವ್ಯಕ್ತ ಪಡಿಸಿದರು.
ಈ ವೇಳೆ ಸ್ಥಳೀಯ ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿ ಆಚಾರ್ಯ ಸೇರಿದಂತೆ ಸ್ಥಳೀಯರು ನಗರಸಭೆಯ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದರು. ನೋಟೀಸು ನೀಡದೇ ಏಕಾಏಕಿ ಶೆಡ್ ತೆರವುಗೊಳಿಸ ಬೇಡಿ. ಇದನ್ನು ದ್ವಂಸಗೊಳಿಸುವ ಮೂಲಕ ಬಡ ಮೀನುಗಾರ ಮಹಿಳೆಯರ ಹೊಟ್ಟೆಗೆ ಹೊಡೆಯಬೇಡಿ ಎಂದವರು ಪರಿಪರಿಯಾಗಿ ಬೇಡಿಕೊಂಡರು.
ಆದರೆ ನಗರಸಭೆಯ ಅಧಿಕಾರಿಗಳು ಇದಕ್ಕೆ ಕ್ಯಾರೇ ಅನ್ನಲ್ಲಿಲ್ಲ. ಇದು ಯಾವುದೇ ಅನುಮತಿ ಪಡೆಯದೇ ಅನಧಿಕೃತವಾಗಿ ನಿರ್ಮಾಣಗೊಳ್ಳುತ್ತಿದೆ. ಹೀಗಾಗಿ ಕಾನೂನು ಪ್ರಕಾರ ಅದನ್ನು ತೆರವುಗೊಳಿಸುತಿದ್ದೇವೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದರು. ಆ ವೇಳೆ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.
ತೆರೆದ ಜಾಗದಲ್ಲಿ ಕುಳಿತು ಮೀನು ಮಾರಾಟ ಮಾಡುತಿದ್ದ ಮಹಿಳೆಯರಿಗೆ ನೆರಳಿನ ವ್ಯವಸ್ಥೆ ಕಲ್ಪಿಸಿ ಎಂದು ದಶಕಗಳಿಂದ ಬೇಡಿಕೆ ಇಟ್ಟರೂ ನಗರಸಭೆ ಮೀನುಗಾರರಿಗೆ ವ್ಯವಸ್ಥೆ ಕಲ್ಪಿಸಿರಲಿಲ್ಲ. ಹೀಗಾಗಿ ತಾತ್ಕಾಲಿಕ ನೆಲೆಯಲ್ಲಿ ಶೆಡ್ ನಿರ್ಮಾಣಕ್ಕೆ ಸ್ಥಳೀಯ ನಗರಸಭಾ ಸದಸ್ಯೆ ಮುಂದಾಗಿದ್ದರು.
ಆದರೆ ನಿರ್ಮಾಣ ಹಂತದಲ್ಲಿರುವಾಗಲೇ ಯಾವುದೇ ಎಚ್ಚರಿಕೆಯನ್ನು ನೀಡದೇ, ಬಳಸಿದ ಕಟ್ಟಡ ಸಾಮಗ್ರಿ ಗಳನ್ನು ಮತ್ತೆ ಬಳಸಿಕೊಳ್ಳಲು ಅವಕಾಶ ವಿಲ್ಲದಂತೆ ಶೆಡ್ ಕೆಡವಿ ಹಾಕಿದ ನಗರಸಭೆಯ ಅಮಾನವೀಯ ಕೃತ್ಯದ ಬಗ್ಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.







.jpeg)





