ಮಂಗಳೂರು; ಟವರ್ ನಿರ್ಮಾಣಕ್ಕೆ ಹಣ ಪಡೆದು ವಂಚನೆ ಆರೋಪ ಸಾಬೀತು
ದಂಡ ಸಹಿತ ಪರಿಹಾರ ನೀಡಲು ನ್ಯಾಯಾಲಯ ಆದೇಶ

ಮಂಗಳೂರು, ಆ.26: ನಗರದ ಮಠದಕಣಿಯ ಪ್ರಕಾಶ್ ವಿ.ನಾಯಕ್ ಎಂಬಾತ ಬಿಎಸ್‌ಎನ್‌ಎಲ್ ಟವರ್ ನಿರ್ಮಿಸಲು ಪ್ರಿಯಾ ಎಸ್. ಭಂಡಾರಿ ಎಂಬವರಿಂದ 36 ಲಕ್ಷ ರೂ. ಪಡೆದು ವಂಚಿಸಿದ ಪ್ರಕರಣವು ಮಂಗಳೂರು ಜೆಎಂಎಫ್‌ಸಿ ೫ನೇ ನ್ಯಾಯಾಲಯದಲ್ಲಿ ಸಾಬೀತಾಗಿದೆ. ಅಪರಾಧಿ ಪ್ರಕಾಶ್ ವಿ.ನಾಯಕ್ ಫಿರ್ಯಾದಿ ಪ್ರಿಯಾ ಎಸ್.ಭಂಡಾರಿಯಿಂದ ಪಡೆದ 36 ಲಕ್ಷ ರೂ. ಅಲ್ಲದೆ 70 ಸಾವಿರ ರೂ. ಪರಿಹಾರ ಹಾಗೂ 5 ಸಾವಿರ ರೂ. ದಂಡ ಪಾವತಿಸುವಂತೆ ತೀರ್ಪು ನೀಡಿದೆ.
ಪ್ರಕಾಶ್ ವಿ.ನಾಯಕ್ ಹಣ ಪಡೆದು ವಾಪಸ್ ನೀಡದೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಪ್ರಿಯಾ ಎಸ್.ಭಂಡಾರಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದು, ಅದು ವಿಚಾರಣಾ ಹಂತದಲ್ಲಿದೆ. ಅಲ್ಲದೆ ಹಣ ವಾಪಸ್ ಕೊಡದಿದ್ದುದಕ್ಕೆ ನ್ಯಾಯಾಲಯದಲ್ಲಿ ನೆಗೋಶಿಯೇಬಲ್ ಇನ್‌ಸ್ಟ್ರ್ರುಮೆಂಟ್ ಕಾಯ್ದೆಯಂತೆಯೂ ಪ್ರಕರಣ ದಾಖಲಿಸಿದ್ದರು. ಸಾಕ್ಷಿ ವಿಚಾರಣೆ ನಡೆಸಿ ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶೆ ಚಿನ್ಮಯಿ ತೀರ್ಪು ಪ್ರಕಟಿಸಿದ್ದಾರೆ.
ಪ್ರಕಾಶ್ ನಾಯಕ್ 5 ಸಾವಿ ರೂ. ದಂಡ ಪಾವತಿಸಲು ತಪ್ಪಿದರೆ 6 ತಿಂಗಳು ಸಾಧಾರಣ ಜೈಲು ಶಿಕ್ಷೆ ಅನುಭವಿಸಬೇಕು ಎಂದು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ. ಫಿರ್ಯಾದಿದಾರರ ಪರವಾಗಿ ಹಿರಿಯ ವಕೀಲ ಆಶಾ ನಾಯಕ್, ಜೀವನ್ ಕೊಲ್ಯ, ಚೈತ್ರಾ ವಾದಿಸಿದ್ದರು.





